ಬಿ.ಆರ್.ಭಾಸ್ಕರ್ ಪ್ರಸಾದ್ ಅವರ ಕೃತಿ ಮಾದಿಗ ಭಾರತ ಇದೀಗ ಸೋಶಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಆದರೆ, ಅದು ಸದ್ದು ಮಾಡುತ್ತಿರುವುದು ಅದರೊಳಗಿನ ಕಂಟೆಂಟ್ ವಿಷಯಕ್ಕಲ್ಲ! ಕೇವಲ ಟೈಟಲ್ ವಿಷಯಕ್ಕೆ. ಕೃತಿಯನ್ನು, ಕೃತಿಯ ಉದ್ದೇಶವನ್ನು, ಕೃತಿಕಾರರ ಸೈದ್ಧಾಂತಿಕ ಬದ್ಧತೆಯನ್ನು ಪ್ರಶ್ನಿಸಿದ್ದರೆ ಅದನ್ನು ವಸ್ತು ನಿಷ್ಠವೆನ್ನಬಹುದು. ಆದರೆ, ಆ ಕೃತಿಯ ಟೈಟಲ್ ಇಟ್ಟುಕೊಂಡು ಕೆಲವೊಂದಿಷ್ಟು ಜನ ಕುಹಕವಾಡುತ್ತಿದ್ದಾರೆ. ಅವರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ, ಆ ಕೃತಿಯ ಒಂದು ಭಾಗವನ್ನು ಇಲ್ಲಿ ನೀಡಲಾಗಿದೆ. ಇಡೀ ಪುಸ್ತಕ ಹೀಗೆ ಜಾತಿಯನ್ನು ಮೀರುವ, ಕಟ್ಟಲ್ಪಟ್ಟ ಭ್ರಮೆಯನ್ನು ಕೆಡವುವ ಕೆಲಸ ಮಾಡುತ್ತಾ ಸಾಗುತ್ತದೆ.
ಈ ಲೇಖನ ಓದಿದ ನಂತರ ಪುಸ್ತಕ ಓದುವ ಆಸಕ್ತಿ ಮೂಡಿದರೆ, ಪುಸ್ತಕ ಬೇಕಾದವರು ಈ ನಂಬರನ್ನು ಸಂಪರ್ಕಿಸಿ: 829 014 6839
ಘಟನೆ 1
ನಾನಾಗ ಬಹಳ ಚಿಕ್ಕ ಹುಡುಗ. ಬಹುಶಃ ಆರೇಳನೆ ತರಗತಿಯಲ್ಲಿದ್ದೆ ಅನ್ಸುತ್ತೆ. ಮಾಗಡಿ ರಸ್ತೆಯ ಪೋಲಿಸ್ ಕ್ವಾಟ್ರಸ್ ಸರ್ಕಾರಿ ಪ್ರಾಥಮಿಕ ಶಾಲೆಯ ನನ್ನ ಸಹಪಾಠಗಳು ವಿಜಯನಗರಕ್ಕೆ ಹೋಗುವ ಬಸ್ಟಾಂಡಿನಲ್ಲಿ ಕುಳಿತು ಅದೂ ಇದು ಅಂತ ಮಾತಾಡುತ್ತಾ, ಮಾತು ಎಲ್ಲಿಂದೆಲ್ಲಿಗೋ ಹೋಗಿ, ನಾನು ಅಂಬರೀಶ್ ಭಕ್ತ, ನಾನು ರಾಜ್ಕುಮಾರ್ ಭಕ್ತ. ನಮ್ ಗುರು ಗ್ರೇಟು, ನಮ್ ಗುರು ಗ್ರೇಟು ಎಂದು ಕಿತ್ತಾಡಿಕೊಳ್ಳುತ್ತಿದ್ದರು. ಆಗ ರಾಜ್ಕುಮಾರ್ ಭಕ್ತ ’ಹೋಗಲೇ ನಿಮ್ ಅಂಬ್ರೀಷ್ ಗೌಡ’ ನಮ್ ರಾಜ್ಕುಮಾರ್ ನೋಡು ರಣಧೀರ ಕಂಠೀರವ ಅಂತ ಅಂದು ಬಿಟ್ಟ. ಅಂಬರೀಶ್ ಭಕ್ತನಿಗೆ ಅದೆಲ್ಲಿತ್ತೋ ಕೋಪ ’ನಿನ್ನಮ್ನುನ್ ನಮ್ ಗುರುನಾ ಗೌಡಾ ಅಂತೀಯಾ, ನೀನು ಗೌಡ, ನಿಮ್ಮಪ್ಪ ಗೌಡ, ನಿಮ್ ಗುರು ರಾಜ್ಕುಮಾರ್ ಗೌಡ’ ಎಂದು ಬೈಯ್ಯಲು ಶುರು ಮಾಡಿದ. ಅಷ್ಟರಲ್ಲಿ ಬಸ್ಟಾಂಡಿನಲ್ಲಿದ್ದ ಹಿರಿಯರೊಬ್ಬರು ಇಬ್ಬರ ಕುಂಡೇ ಮೇಲೂ ಒಂದೊಂದು ಬಿಗಿದು ಅಲ್ಲಿಂದ ಓಡಿಸಿದರು.
ಘಟನೆ 2
ನಮ್ಮ ಮನೆ ಇದ್ದದ್ದು RPC ಲೇಔಟ್‌ನಲ್ಲಿ. RPC ಲೇಔಟ್‌ಗೆ ಹೊಂದಿಕೊಂಡಂತಿರುವ ಬಾಪೂಜಿ ನಗರದ ರೈಲ್ವೇ ಟ್ರಾಕ್ ಪಕ್ಕ ಆಗ ಒಂದು ಸ್ಲಂ ಇತ್ತು. ಬರೀ ಗುಡಿಸಲುಗಳೇ ತುಂಬಿದ್ದವು. ಅಲ್ಲೊಂದು ಕಾಕಾ ಅಂಗಡಿ. ನಮ್ಮ ಮನೆಗೆ ಏನೇ ಚಿಲ್ಲರೆ ಸಾಮಾನು ತರಬೇಕೆಂದರೂ ನಾವು ಅದೇ ಅಂಗಡಿಯಿಂದ ತರಬೇಕಿತ್ತು. ಅದನ್ನು ಬಿಟ್ಟು ನಮ್ಮ ಮನೆಯ ಆಸುಪಾಸು ಯಾವ ಅಂಗಡಿಗಳೂ ಇರಲಿಲ್ಲ. ಬಹುಶಃ ಅದು ೧೯೮೫ರ ಆಸುಪಾಸಿನ ಇಸವಿ ಅನ್ಸುತ್ತೆ. ಅವತ್ತು ನಾನು ಒಂದು ರೂಪಾಯಿಗೆ ಕಡ್ಲೇ ಕಾಯಿ ಎಣ್ಣೆ ತರೋಕೆ ಅಂತ ಖಾಲಿ ಸೀಸೆ ಹಿಡ್ಕೊಂಡು, ಅದೇ ಕಾಕ ಅಂಗಡಿಗೆ ಹೋಗಿದ್ದೆ. ಹಳ್ಳಿಯ ಕಡೆಯಿಂದ ವೀಳ್ಯದೆಲೆ ಮಾರಾಟಕ್ಕೆ ಅಂತ ಎಲೆ ಮಂಕರಿ ಹೊತ್ಕೊಂಡು ಬಂದಿದ್ದ ಒಬ್ಬ ಮಧ್ಯ ವಯಸ್ಕ ವ್ಯಕ್ತಿಗೂ ಅಂಗಡಿಯ ಕಾಕನಿಗೂ ಎಲೆ ವ್ಯಾಪಾರದ ಮಾತು ಕತೆ ನಡೆದಿತ್ತು. ಮಾತಿನ ಮಧ್ಯೆ ಆ ಎಲೆ ವ್ಯಾಪಾರಿ ’ಏ ಹೇಳು ಗೌಡ ಅದೆಷ್ಟು ಕೊಡ್ತೀ’ ಅಂತ ಕಾಕನಿಗೆ ಹೇಳಿದ್ದೇ ತಡ, ಕಾಕ ಕೆಂಡಾ ಮಂಡಲವಾಗಿ ಬಿಟ್ಟ. ’ಏ ಯಾವನಿಗೆ ನೀನು ಗೌಡ ಅಂತೀಯಾ? ನೀನು ಗೌಡ, ನಾನ್ಯಾಕೆ ಗೌಡ ಆಗಲಿ? ಹೋಗು ನೀನು ಬೇಡ, ನಿನ್ ಎಲೇನೂ ಬೇಡ’ ಅಂದ. ಪಾಪ ಆ ಎಲೆ ವ್ಯಾಪಾರಿ ನಾನೇನು ತಪ್ಪು ಮಾತಾಡಿದೆ ಎಂದು ಅರ್ಥ ಆಗದೇ ಸುಮ್ಮನೆ ಎದ್ದು ಹೋಗಿ ಬಿಟ್ಟ.
ಘಟನೆ 3
ಇದು ಇಡೀ ನಾಡಿಗೆ ನಾಡೇ ನೋಡಿರುವ ಮತ್ತು ಕೇಳಿರುವ ಘಟನೆ. ಕರ್ನಾಟಕದ ವರಪುತ್ರ ಡಾ. ರಾಜಣ್ಣ ಅಭಿನಯದ ಬಂಗಾರದ ಮನುಷ್ಯ ಚಿತ್ರದ ದೃಶ್ಯ. ಮನೆ ಹಿರಿಯ ರಾಜೀವಪ್ಪನ ಪಾತ್ರಧಾರಿ ಡಾ. ರಾಜಣ್ಣನವರ ಎದುರು ನಿಂತ ವಜ್ರಮುನಿಯವರು ವಾದ ವಿವಾದದಲ್ಲಿ ತೊಡಗಿರುತ್ತಾರೆ. ತಾನು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತೇನೆ, ನನಗೆ ಅಪಾರ ಹಣ ಬೇಕು ಎಂದು ಹಠ ಹಿಡಿದಿರುತ್ತಾರೆ. ಆ ಸಂದರ್ಭದ ಮಾತುಕತೆಯಲ್ಲಿ ವಜ್ರಮುನಿ ಅವರು ’ನಾವು ವಾಸ ಮಾಡ್ತಾ ಇರೋದು ಬೆಂಗಳೂರಿನಲ್ಲಿ. ಅಲ್ಲಿರೋರೆಲ್ಲಾ ಬಹಳ ದೊಡ್ಡ ದೊಡ್ಡ ಮನುಷ್ಯರು. ಸಗಣಿ ಹೊರುವ ಗೌಡರಲ್ಲ ಎನ್ನುವ ಮಾತಾಡುತ್ತಾರೆ. ಈ ಮಾತಿನಿಂದ ರಾಜಣ್ಣ ಬಹಳವಾಗಿ ನೊಂದುಕೊಳ್ಳುತ್ತಾರೆ. ವಜ್ರಮುನಿ ಅವರಿಗೆ ಬಿಡಿ ಕಾಸೂ ಕೊಡಲ್ಲ ಎಂದು ರೇಗಿ ಕಳಿಸಿಬಿಡುತ್ತಾರೆ.
ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ, ಯಾವಾಗ ಬಂದೆ ಬೆಂಗ್ಳೂರ್ ತಕ್ಕ?
ತಯ್ಯಾ ತಕ್ಕ ತಯ್ಯ ತಯ್ಯಾ ತಕ್ಕ ಕಾಲೇಜಿಗೆ ಬಂದನಯ್ಯ ಹಳ್ಳಿ ಮುಕ್ಕ!
ಇದು ಪಟ್ಟಣಕ್ಕೆ ಬಂದ ಪುಟ್ಟ ಚಿತ್ರದ ಹಾಡು. ಹೀಗೆ ಪ್ರಾರಂಭವಾಗುವ ಅದೆಷ್ಟೋ ಹಾಡುಗಳ ಮೂಲಕ ಚಲನಚಿತ್ರಗಳಲ್ಲೂ ಒಕ್ಕಲು ಮಕ್ಕಳನ್ನು ದಡ್ಡ, ಹೆಡ್ಡ, ಅನಾಗರಿಕ ಎಂದೆಲ್ಲಾ ನಿಂದಿಸಿ ಅವಮಾನಿಸುವ ಚಾಳಿಯೇ ಬೆಳೆದು ಬಂದಿತ್ತು. ಪಟ್ಟಣದ ವಾಸಿಗಳೆಲ್ಲಾ ಶ್ರೇಷ್ಟರು, ಹಳ್ಳಿ ವಾಸಿ ಒಕ್ಕಲು ಮಕ್ಕಳೆಲ್ಲ ಕನಿಷ್ಟರು ಎನ್ನುವ ದಾರಿದ್ಯದ ಬುದ್ದಿಯೇ ತುಂಬಿ ತುಳುಕುತ್ತಿತ್ತು.
ಬೋರೇ ಗೌಡ ಬೆಂಗಳೂರಿಗ್ ಬಂದ ಎನ್ನುವ ಹಾಡಲ್ಲಂತೂ, ಗೌಡ ಅದೆಷ್ಟು ದಡ್ಡ, ಅಮಾಯಕ ಎನ್ನುವ ಹಾಗೆ ಬಿಂಬಿಸಿ ತೀರ ಅವಮಾನಿಸಲಾಗುತ್ತಿತ್ತು. ಗೌಡರ ಈ ಪದವಿ ಸೂಚಕ ಪದವನ್ನು, ಒಕ್ಕಲು ಮಕ್ಕಳನ್ನು ಅವಮಾನಿಸಲು ಈ ನಾಡಿನ ಬ್ರಾಹ್ಮಣ್ಯಕ್ಕೇನು ಕಾರಣಗಳಿಲ್ಲದೇ ಇಲ್ಲ. ಟಿಪ್ಪು ಸುಲ್ತಾನರು ಯಾವಾಗ ಊರಿನ ನಾಯಕತ್ವವನ್ನು ಬ್ರಾಹ್ಮಣರಿಂದ ಕಿತ್ತು ಒಕ್ಕಲಿಗರ ಮಡಿಲಿಗಾಕಿ, ಊರಗೌಡರ ನಾಯಕತ್ವದಲ್ಲಿ ಬ್ರಾಹ್ಮಣ ಲೆಕ್ಕಿಗರು ಶಾನುಭೋಗಿಕೆ ಮಾಡಿಕೊಂಡಿರುವಂತ ವ್ಯವಸ್ಥೆ ಮಾಡಿದರೋ ಅದರ ಕೋಪವನ್ನು, ಗೌಡರನ್ನು ಅವಮಾನಿಸುವ ಜೋಕು, ಕತೆ, ಕವನಗಳನ್ನು ಕಟ್ಟುವ ಮೂಲಕ ತೀರಿಸಿಕೊಳ್ಳಲು ಹವಣಿಸಿದ ದುಷ್ಟ ಜಾತಿ ವ್ಯಸನವು ಈ ಭಾರತಕ್ಕಂಟಿದ ರೋಗವಾಗಿದೆ.
ಬಹುಶಃ ಈ ಜಾತಿ ರೋಗದ ಬಗ್ಗೆ ಸ್ಪಷ್ಟ ಅರಿವಿದ್ದ ದೇವೇಗೌಡರು ತಮ್ಮ ಯಾವ ಮಕ್ಕಳಿಗೂ ಅವರ ಹೆಸರಿನ ಜೊತೆಯಲ್ಲಿ ಗೌಡ ಪದನಾಮವನ್ನು ಸೇರಿಸಿರಲಿಲ್ಲ ಅನ್ನಿಸುತ್ತೆ. ದೇವೇಗೌಡರ ತಂದೆ ತಾಯಿಯರೇನೋ ದೇವೇಗೌಡರಿಗೆ ಗೌಡ ಪದನಾಮವನ್ನು ಇಟ್ಟಿರಬಹುದು. ಆದರೇ, ಗೌಡ ಪದನಾಮವು ಬ್ರಾಹ್ಮಣ್ಯದ ಜಾತಿ ಅಹಂಕಾರಕ್ಕೆ ಈಡಾಗಿದ್ದನ್ನು ಅರ್ಥ ಮಾಡಿಕೊಂಡಿದ್ದ ದೇವೇಗೌಡರು ಮಾತ್ರ ತಮ್ಮ ಮಕ್ಕಳ ಹೆಸರಿಗೆ ಗೌಡ ಪದನಾಮವನ್ನು ಸೇರಿಸಿರಲಿಲ್ಲ. ರೇವಣ್ಣ, ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ ಹೀಗೆ ಹೆಸರನ್ನು ಇಟ್ಟು ಸುಮ್ಮನಾದರು. ಆದರೇ, ಯಾವಾಗ ಈ ಸಮಾಜದಲ್ಲಿ ನಾನು ಗೌಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಘನತೆಯ ಪರಿಸ್ಥಿತಿ ನಿರ್ಮಾಣವಾಯಿತೋ ಆ ನಂತರದ ದೇವೇಗೌಡರ ಮಕ್ಕಳ ಮಕ್ಕಳ ಹೆಸರಿನ ಜೊತೆಗೆಲ್ಲಾ ಗೌಡ ಪದನಾಮವು ಹೆಮ್ಮೆಯಿಂದ ಸೇರಿಕೊಂಡಿತು. ಇವತ್ತು ಆಗಷ್ಟೇ ಹುಟ್ಟಿದ ಮಕ್ಕಳಿಗೂ ಹೆಸರಿನ ಜೊತೆ ಗೌಡ ಸೇರಿಸಿ ಆನಂದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಕಾರಣರಾದವರಲ್ಲಿ, ಈ ಜಾತಿ ವ್ಯಸನಿಗಳ ರೋಗಕ್ಕೆ ಸರಿಯಾದ ಗುದ್ದು ನೀಡಿ, ಗೌಡರಿಗೆ ಆತ್ಮ ಗೌರವದ ಎದೆಗಾರಿಕೆ ತಂದುಕೊಟ್ಟು, “ನಾನು ಗೌಡ, ಹಾಯ್ ಗೌಡಾಸ್ ಎಂದು ಬರೆದುಕೊಂಡು ಓಡಾಡುವ ಮಟ್ಟಕ್ಕೆ ಈ ನಾಡಿನ ಒಕ್ಕಲು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಈ ಮಣ್ಣಿನ ಮಗ ದೇವೇಗೌಡರು ಮತ್ತು ಆದಿ ಚುಂಚನಗಿರಿ ಮಠದ ಕೊಡುಗೆ ಅಪಾರವಾದುದು. ಅಭಿನಂದನೀಯವಾದುದು.
ಹೀಗೆ ಹೆಮ್ಮೆ ಪಡಬೇಕಾದ ಗೌಡ ಎನ್ನುವ ಇವತ್ತಿನ ಪದ ಅವತ್ತಿನ ಒಂದು ಕಾಲಕ್ಕೆ ಅವಮಾನ ಮತ್ತು ಅವಗಣನೆಗೆ ಒಳಗಾದ ಪದವಾಗಿತ್ತು ಎಂಬುದನ್ನು ಈ ಮೇಲಿನ ಘಟನೆಗಳು ಎತ್ತಿ ತೋರಿಸುತ್ತವೆ. ಆದರೇ, ಗೌಡ ಎಂದ ಪದವಿ ಸೂಚಕ ಪದವು ನಿಜವಾಗಿಯೂ ಹೀಗೆ ಅವಮಾನಕ್ಕೊಳಗಾಗುವ ಪದವಾಗಿತ್ತೇ? ಯಾಕೆ ಗೌಡ ಎಂಬ ಪದವನ್ನು ಸ್ವೀಕರಿಸಲು ಆಗಿನ ನಗರ ಪ್ರದೇಶದ ಜನ ಹಿಂಜರಿಯುತ್ತಿದ್ದರು. ಇದರ ಹಿಂದಿನ ಕೃತ್ಯವೇನು ಎಂದು ನೋಡುವಾಗ, ಗೌಡ ಎಂಬ ಪದವಿ ಸೂಚಕ ಪದವು ಕೇವಲ ಕೂತುಣ್ಣುವ ಸೋಮಾರಿಗಳ ಪದವಿ ಸೂಚಕ ಹೆಸರಾಗಿರದೆ, ಗೌಡ ಪದವು ಶ್ರಮ ಜೀವಿಗಳ ಹೆಸರಾಗಿತ್ತು. ಬೆವರು ಹರಿಸಿ, ಶ್ರಮವಹಿಸಿ, ಉತ್ತು ಬಿತು, ಅನ್ನ ಬೆಳೆಯುವುದರ ಜೊತೆಗೆ ಊರ ರಕ್ಷಣೆ ಹಾಗು ಉಸಾಬರಿ ನೋಡುವ ನೈಜ ಶ್ರಮಜೀವಿಗಳ ಪದವಿ ಸೂಚಕ ಪದವಾಗಿತ್ತು. ಆದರೇನು ಮಾಡೋದು? ಈ ದೇಶದ ಬ್ರಾಹ್ಮಣ್ಯವು ಶ್ರಮಜೀವಿಗಳನ್ನು ಅವಮಾನಿಸುವ, ಶ್ರಮಜೀವಿಗಳೆಂದರೆ ದಡ್ಡರು, ಗಲೀಜಿನವರು ಎಂದು ಬಿಂಬಿಸಿ ಗೌಡ ಪದವನ್ನು ಕನಿಷ್ಟವಾಗಿಯೂ, ಅಸಹ್ಯವಾಗಿಯೂ ನೋಡುವ ಹುನ್ನಾರವನ್ನು ಹೆಣೆದುಬಿಟ್ಟಿದ್ದರು.
ಈ ನಾಡಿನ ಹೆಮ್ಮೆಯ ಮಣ್ಣಿನ ಮಗ ದೇವೇಗೌಡರು ಯಾವಾಗ ಕನ್ನಡ ನಾಡಿನ ಮುಖ್ಯಮಂತ್ರಿಯಾದರೋ ಆಗ ಗೌಡ ಎಂದರೆ ದಡ್ಡರು, ಸಗಣಿ ಹೊರುವವರು ಎನ್ನುವ ಅಪಮಾನದ ಹೇರಿಕೆಯ ಪೊರೆಯನ್ನು ಕಳಚಿಕೊಂಡು ಅಲ್ಲಿನವರೆಗೂ ಗೌಡ ಎಂದು ಕರೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದ ವಿದ್ಯಾವಂತರೂ ತಮ್ಮ ಕಾರು, ಬೈಕುಗಳ ಮೇಲೆ “ಹಾಯ್ ಗೌಡಾಸ್ ಎಂದು ಹೆಮ್ಮೆಯಿಂದ ಬರೆದುಕೊಂಡು ತಿರುಗಲು ಶುರುಮಾಡಿದರು. ಕಾಲೇಜು ಹುಡುಗ ಹುಡುಗಿಯರು ತಮ್ಮ ಹೆಸರಿನ ಮುಂದೆ ಗೌಡ ಎಂದು ಸೇರಿಸಿಕೊಳ್ಳತೊಡಗಿದರು.
ದೇವೇಗೌಡರು ಪ್ರಧಾನಿ ಆದಾಗಲಂತೂ ಇದು ಇನ್ನೂ ಹೆಚ್ಚೆಚ್ಚು ಅಭಿಮಾನದ ಸಂಕೇತವಾಗತೊಡಗಿತು. ನಾವು ಸಗಣಿ ಹೊರೋಕಷ್ಟೇ ಲಾಯಕ್ಕಲ್ಲ. ದೇಶ ಆಳಲು ಸೈ ಎಂದು ಕಾಲರ್ ಎತ್ತಿ ಓಡಾಡಲು ತೊಡಗಿದರು. Political power is the master key ಎಂದು ಬಾಬಾ ಸಾಹೇಬರು ಹೇಳುವಂತೆ ರಾಜಕಾರಣದ ಪವರ್ರೇ ಅಂತದ್ದು. ಗೌಡರು ಇದನ್ನು ಅರ್ಥ ಮಾಡಿಕೊಂಡರು. ಧಾರ್ಮಿಕ ಕ್ಷೇತ್ರದಲ್ಲಿದ್ದುಕೊಂಡೇ ನಿರಂತರ ಕ್ರಾಂತಿಯ ಮೂಲಕ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಒಕ್ಕಲು ಮಕ್ಕಳನ್ನು ಬೆಳೆಸುವಲ್ಲಿ ಪೂಜ್ಯ ಬಾಲ ಗಂಗಾದರನಾಥ ಸ್ವಾಮಿಗಳು ವಹಿಸಿದ ಪಾತ್ರ ನಾಡಿಗೆ ನಾಡೇ ಮೆಚ್ಚಿ ಶರಣು ಹೋಗಬೇಕಾದ ಕ್ರಾಂತಿಕಾರಕ ನಡೆಯಾಗಿತ್ತು.
ಹಾಯ್ ಕುರುಬಾಸ್
ಕುಂತ್ರೆ ಕುರುಬ ನಿಂತ್ರೆ ಕಿರುಬ
ಕೇವಲ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಕಾರು ಬೈಕುಗಳ ಮೇಲೆ ನೀವು ಈ ಮೇಲಿನ ಎರಡೂ ಡೈಲಾಗ್‌ಗಳನ್ನು ನೋಡಿರುತ್ತೀರಿ ಮತ್ತು ಓದಿರುತ್ತೀರಿ.
ಅಪ್ಪಾ ಅದೆಷ್ಟು ಸೊಕ್ಕು ಇವಕ್ಕೆ, ಜಾತಿಯನ್ನು ಹೀಗೆ ಅಹಂಕಾರದಿಂದ ಹೇಳಿಕೊಂಡು ತಿರುಗ್ತಾರಲ್ಲಾ ಎನ್ನುವ ಕೆಲವು ಒಳಗಿನಿಂದ ಜಾತಿವಾದಿಗಳೂ ಮತ್ತು ಹೊರಗೆಲ್ಲಾ ಜಾತ್ಯಾತೀತರ ಪೋಸು ಹೊದ್ದ ಜಾತಿ ವ್ಯಸನಿಗರನ್ನೂ ನೀವು ನೋಡಿರುತ್ತೀರಿ. ಮತ್ತು ಅಂತಹವರ ಹೆಸರಿನ ಮುಂದೆ ರಾವ್, ಶರ್ಮ, ಭಟ್, ಆರ್ಯ, ಆಚಾರ್ಯ ಎಂಬ ತಮ್ಮ ಜಾತಿ ಅಹಂಮ್ಮಿನ ಜೋಡಣೆಯನ್ನೂ ನೀವು ಕಂಡಿರುತ್ತೀರಿ.
ಕುರುಬರಿಗೇನು ಈ ಜಾತಿಯ ಸೊಕ್ಕು ಸುಖಾ ಸುಮ್ಮನೆ ಬಂದಿರುವುದಲ್ಲ. ಶತಶತಮಾನಗಳ ತಮ್ಮ ಅವಮಾನದ ನೋವನ್ನು ಗೆದ್ದ ಜಯಕಾರದ ಸೊಕ್ಕಿದು. ಈ ಸೊಕ್ಕಿನ ಹಿಂದೆ ಶತಶತಮಾನಗಳ ಅವಹೇಳನದ ಎದೆಗೆ ಜಾಡಿಸಿ ಒದ್ದು, ಸೇಡು ತೀರಿಸಿಕೊಂಡ ಸೊಕ್ಕಿದು. ’ಕುರುಬನಿಗೆ ಕುರಿ ಕಾಯೋದು ಗೊತ್ತು, ಸಮಯ ಬಂದ್ರೆ ರಾಜ್ಯಾಧಿಕಾರ ನಡೆಸೋಕೂ ಗೊತ್ತು’ ಎನ್ನುವ ಜಾತಿ ಅಭಿಮಾನದ ಸೊಕ್ಕಿದು. ಈ ಸೊಕ್ಕಿಗೆ ಒಂದಷ್ಟು ಉಪ್ಪು ಸೊಪ್ಪು ಹಾಕಿ ಶಕ್ತಿ ತುಂಬಿಸಿದ್ದು ಕಾಗಿ ನೆಲೆಯ ಗುರು ಪೀಠ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
Once again ರಾಜಕಾರಣದ ತಾಕತ್ತಂದ್ರೆ, ಅದು ಹೀಗೆಯೇ ಕೆಲಸ ಮಾಡುತ್ತೆ. ದೇವರು ಧರ್ಮಗಳ ಹೆಸರಲ್ಲಿ, ಅವರ ಜಾತಿಯ ಕಾರಣದಿಂದಾಗಿಯೇ ಕಾಲಾನು ಕಾಲಕ್ಕೂ ಅವಗಣನೆಗೆ ಒಳಗಾಗಿದ್ದ ಕುರುಬ ಸಮುದಾಯವು ತಮಗೆ ಸಿಕ್ಕ ಅಷ್ಟಿಷ್ಟು ರಾಜಕೀಯ ಶಕ್ತಿಯಿಂದಾಗಿಯೇ ತಮ್ಮ ಜಾತಿಯನ್ನು ಮೆರೆಯುವುದು ಅಹಂಕಾರ ಅಥವಾ ಜಾತಿ ಮದ ಎಂದು ಯಾರಿಗಾದರು ಅನ್ನಿಸಿದರೆ ಅವರಿಗೇನೋ ಮಾನಸಿಕ ರೋಗ ಇದೆ ಎಂದೇ ಅರ್ಥ.
ಮಾದಿಗ ಭಾರತದಲ್ಲಿ ಮುರುಟಿ ಹೋಗಿರುವ ಮಾದಿಗರ ಜಾತಿ ಪ್ರಜ್ಞೆ
ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತು ಅದೆಷ್ಟು ನಿಜ ನೋಡಿ “ಇತಿಹಾಸ ತಿಳಿಯದವನು ಇತಿಹಾಸವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಅದರಂತೆಯೇ ಭಾರತದ ಚರಿತ್ರೆಯೇ ತಾನಾಗಿ, ತನ್ನ ಭವ್ಯ ಇತಿಹಾಸವನ್ನು ಅರಿತು ಎದೆಯೆತ್ತಿ ಮುನ್ನಡೆಯದಿದ್ದರೆ ಮಾದಿಗ ಸಮುದಾಯವು ತನಗೆ ತಾನೇ ಅನ್ಯಾಯ ಮಾಡಿಕೊಂಡಂತೆ. ನಾಡು ಕಟ್ಟಿ ನುಡಿ ಕಟ್ಟಿ ಕೋಟೆ ಕೊತ್ತಲಗಳ ಕಟ್ಟಿ ರಾಜ್ಯಾವಾಳಿದಂತೋರು ನಾವು, ರಾಜ್ಯವಾಳಿದಂತೋರು ನಾವು.
ಎಂದು ಹೆಮ್ಮೆಯಿಂದ, ಎದೆ ಎತ್ತಿ ಹೇಳಬೇಕಿದ್ದ ಮಾದಿಗ ಸಮುದಾಯವಿಂದು
ಮಾದಿಗಣ್ಣ ಓ ಮಾದಿಗಣ್ಣ ಓ ಹೇಳೋ ಮಾದಿಗಣ್ಣ
ಮಾತನಾಡದೆ ಮೌನವೇಕಾದೆ ಹೇಳೋ ಮಾದಿಗಣ್ಣ
ಮಾತಾಡೋ ಮಾದಿಗಣ್ಣ
ಎಂದು ಹಾಡಾಡಿಕೊಂಡು ನ್ಯಾಯ ನ್ಯಾಯ ಎಂದು ನ್ಯಾಯಕ್ಕಾಗಿ ಅಂಗಲಾಚುತ್ತಾ ಊರೂರು ತಿರುಗುತ್ತಿದೆ. ಸಿಕ್ಕಸಿಕ್ಕವರ ಸಹಾಯ ಬೇಡುತ್ತಾ ಅಂಗಲಾಚುತ್ತಿದೆ. ಮಾದಿಗರ ಹಣೆಬರಹವೇ ಇಷ್ಟಾ? ಮಾದಿಗರೆಂದರೇ ಈ ಸಮಾಜಕ್ಕೆ ಅಷ್ಟು ಕಡೆಗಣನೆ ಯಾಕಾಗಿದೆ? ಮಾದಿಗರ ಇತಿಹಾಸ ಏನು ಹೇಳುತ್ತೆ ಎಂದು ನೋಡುವಾಗ ಭಾರತವೆಂಬುದು ಮಹಾಭಾರತವಲ್ಲ ಬದಲಾಗಿ ಇದು ಆದಿಗ ಭಾರತ, ಮಾದಿಗ ಭಾರತ, ಮಹಾ ಆದಿಗ ಭಾರತ ಎಂದು ಒತ್ತಿ ಒತ್ತಿ ಹೇಳುತ್ತದೆ. ಮಾದಿಗರ ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹೆಗ್ಗುರುತುಗಳು ಭಾರತದ ಪರಂಪರೆಯ ಹೆಜ್ಜೆ ಹೆಜ್ಜೆಯಲ್ಲೂ ಅಚ್ಚೊತ್ತೋಗಿದೆ. ಮಾದಿಗರ ಚರಿತ್ರೆಯ ಹೆಗ್ಗುರುತಿಲ್ಲದ ಭಾರತದ ಚರಿತ್ರೆ ಅಪೂರ್ಣ ಎನ್ನುವುದಕ್ಕಿಂತ, ಮಾದಿಗರ ಚರಿತ್ರೆಯ ಹೆಗ್ಗುರುತಿಲ್ಲದ ಭಾರತದ ಚರಿತ್ರೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡಬಹುದು.
ಕಂಚಿ ಶಾಸನ
ದಕ್ಷಿಣ ಕರ್ನಾಟಕದವರು ಹೊಂದಿರುವ ಕಂಚಿ ಶಾಸನಂ ಕೈಫಿಯತ್ತು ಮತ್ತು ಜಾಂಬವ ಪುರಾಣಗಳು, ಆಸಾದಿ ಜನಪದ ಕಲಾಪ್ರಕಾರಗಳೇ ಮೊದಲಾಗಿ ಸಾರುವಂತೆ, ಭೂಮಿಗೂ ಆರು ತಿಂಗಳು ಮೊದಲು ಹುಟ್ಟಿದ್ದು ಜಾಂಬವಮುನಿ ಎಂದು ಮಾದಿಗರ ಪೌರಾಣಿಕ ಹಿನ್ನೆಲೆಯನ್ನು ಪ್ರಸ್ತುತಪಡಿಸುತ್ತದೆ. ಅದಕ್ಕೆ ಉದಾಹರಣೆಯಗಿ ಕಂಚಿಶಾಸನದ ಒಕ್ಕಣೆಯನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ, ಗಮನಿಸಿ.
ಶುಭ ಕಂಚಿಶಾಸನ ಲಾಭ
“ಕಂಚಿ ಶಾಸನ ಬರೆಯುವುದಕ್ಕೆ ಶುಭಮಸ್ತು ಶೋಬಾನ ಮಸ್ತು”
||ಶ್ಲೋಕಂ||
ನಭೋಮಿನಚ | ನಚಲಂ | ಜೈವನಚಃ | ತೇಜೋನಚ |
ವಾಯುವು ನಮಃ | ನಕಾಶಕನಚಲ | ಚತಂ | ಚಲನಂ |
ಬುದ್ದಿಯೇ ಗೋಚರ | ನಚವಿಷ್ಣು | ನಚರುದ್ರ
ಶ್ವೇತಾರಕ | ಸರ್ವಶೂನ್ಯ |
ನೀಲಂಭ | ಬುದ್ದಿ ಶ್ರೀ ಕರ್ಣಂ |
ಭೂಮಿ ಇಲ್ಲದ ವೇಳೆಯಲ್ಲಿ, ಜಲವಿಲ್ಲದ ವೇಳೆಯಲ್ಲಿ, ವಾಯುವಿಲ್ಲದ ವೇಳೆಯಲ್ಲಿ, ಸೂರ್ಯ, ಚಂದ್ರ, ಅಂಗಾರಕ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು, ಕೇತು, ನವಗ್ರಹಗಳು ಇಲ್ಲದ ವೇಳೆಯಲ್ಲಿ. ಕಾಮ, ಕ್ರೋಧ, ಲೋಭ, ಮಧ, ಮತ್ಸರ, ಅಹಂಕಾರ ಮೂಲಕೃತಿಗಳಿಲ್ಲದ ವೇಳೆಯಲ್ಲಿ ಸಾಕ್ಷತ್ ವಿಶ್ವರೂಪವಾದ ಭಗವಂತನು ವಿಶ್ವರೂಪವನ್ನು ತಾಳಿದ.
ಸಹಸ್ರ ಕಲೆಗಳಿಂದ, ಸಹಸ್ರ ಬಾಹುಗಳಿಂದ ಸಹಸ್ರ ನೇತ್ರಗಳಿಂದ, ಸಹಸ್ರ ಕರ್ಣಗಳಿಂದ, ಸಹಸ್ರ ಶಿರಸ್ಸುಗಳಿಂದ ಸಹಸ್ರ ಪಾದಗಳಿಂದಲು, ವಿಶ್ವರೂಪವನ್ನು ನಿರ್ಮಿಸುವುದಕ್ಕೆ ವಿಶ್ವರೂಪವನ್ನು ಧರಿಸಿ ಭಗವಂತನ ಹೆಸರಿನಿಂದ ಇರಲು, ಆಗ ಅಂದರೆ ನನ್ನಿಂದ ಜಗತ್ತು ನಿರ್ಮಿತವಾಗಬೇಕೆಂದು ಯೋಚಿಸಿ ಆತ್ಮಯವಾದ ಜಲದಲ್ಲಿ ಒಂದು ಶಂಕುವನ್ನು ನಿರ್ಮಿಸಿ ಆ ಶಂಕುವಿನಲ್ಲಿ ತನ್ನ ಸಹಸ್ರ ಕಲೆಗಳಂ ತುಂಬಿದನು. ಆ ಶಂಕುವಿನಲ್ಲಿ ಉತ್ಪತ್ತಿಯಾದ ಬಲ್ಲೂಕಪತಿ, ಆದಿಜಾಂಬುವಂತನು ಉದ್ಭವಿಸಿದನು. ಈ ಪ್ರಕಾರ ಹುಟ್ಟಿದಂಥ ಋಷಿಗೆ ಜಾಂಬುಮುನಿ ಹುಟ್ಟಿದರಿಂದ ಜಾಂಬುಮುನಿಯನ್ನು ಜಂಬೂ ದ್ವೀಪಾಂತರಕ್ಕೆ ತಪಿಸ್ಸಿಗೆ ಹೋಗು ಎಂದು ಸಾಕ್ಷತ್ ಭಗವಂತನು ಅಪ್ಪಣೆಯಂ ಕೊಡಲು ಜಾಂಬು ಮುನಿಯು ಜಾಂಬೂ ದ್ವೀಪಾಂತರಕ್ಕೆ ಹೋಗಿ ಜಂಬೂಕ ನದಿಯ ಹತ್ತಿರ ತಾವರೆ ಕಮಲದ ಮೇಲೆ ಕುಳಿತು ತಪಸ್ಸು ಮಾಡುಲತ್ತಿದನು.
*
ದೈವಿಕಾಚರಣೆಗಳಲ್ಲೂ ಮಾದಿಗರದು ಐತಿಹಾಸಿಕ ದಾಖಲೆಗಳಿವೆ
ಸವದತ್ತಿ ಎಲ್ಲಮ್ಮ ಮಾದಿಗರಾದರೆ, ಸಿರಸಿ ಮಾರಮ್ಮನ ಸ್ಥಾಪಕರು ಮಾದಿಗರ ಉಪಜಾತಿಯಾದ ಆಸಾದಿಗಳು. ಮಾತಂಗಿ ಮಾದಿಗ ಮೂಲದ ದೇವತೆ. ಮಾದಿಗರು ತೊಗಲು ಕೆಲಸ ಮಾಡುವ ಕುಶಲಕರ್ಮಿಗಳು.
ಮಾತಂಗ ಮುನಿ ಮಾದಿಗರ ಒಬ್ಬ ಪುರಾತನ ಮುನಿ ತೊಗಲ ಕಾಯಕನಿಷ್ಠ. ತನ್ನ ಪಾದರಕ್ಷೆ ತಯಾರಿಸುವ ಕುಶತೆಯಿಂದಲೇ ಬ್ರಾಹ್ಮಣ ಕನ್ಯೆಯ ಅಹಂಗೆ ಬುದ್ಧಿಕಲಿಸಿದವನು. ಒಮ್ಮೆ ಮೆಟ್ಟು ತಯಾರಿಸುವ ಕಾಯಕದಲ್ಲಿ ತಲ್ಲೀನನಗಿದ್ದ ಮಾತಂಗ ಮುನಿಯೆದುರು ಹಾದು ಹೋದ ಬ್ರಾಹ್ಮಣ ಕನ್ಯೆ ಈತನನ್ನು ನೋಡಿ ಅಣಕಿಸಿದಳೆಂಬ ಕಾರಣಕ್ಕೆ ಆಕೆಯ ಮನೆಯ ಮುಂದೆ ಸತ್ಯಾಗ್ರಹ ಕುಳಿತನೆಂಬ ಪ್ರತೀತಿ ಇದೆ. ಈ ಮೂಲಕ ಸತ್ಯಾಗ್ರಹ ಅಹಿಂಸೆಯೆಂಬುದನ್ನು ಮೊಟ್ಟ ಮೊದಲಿಗೆ ಪರಿಚಯಿಸಿದಾತ ಮಾತಂಗ ಎಂಬ ವಿವರಗಳಿವೆ.
ಮಾದಿಗ ಶಬ್ದ ಮಾತಂಗ ಮೂಲದಿಂದಲೂ ಬಂದದ್ದಾಗಿದೆ ಎಂಬ ಅಭಿಪ್ರಾಯಗಳಿವೆ. ಚೀನಾ ದೇಶಕ್ಕೆ ಬೌದ್ಧ ಧರ್ಮವನ್ನು ಮೊಟ್ಟ ಮೊದಲ ಬಾರಿಗೆ ಕೊಂಡೊಯ್ದವನು ಮಾತಂಗ ಎಂಬ ಹೆಸರಿನವನು ಎಂಬ ವಿವರಗಳು ಸಿಗುತ್ತವೆ. ಬುದ್ಧನೂ ಒಮ್ಮೆ ತನ್ನನ್ನು ತಾನು ಮಾತಂಗ ಬುದ್ಧ ಎಂದು ಕರೆದುಕೊಂಡಿದ್ದಾನೆ.
*
ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನಿಗೆ ತುತ್ತಿಟ್ಟು, ಅಕ್ಷರ ಕಲಿಸಿ ಸಲಹಿದ ಮಾತೆ ಅರುಂಧತಿ ಮಾದಿಗ ಕುಲಮೂಲಧಾತೆ. ಕುರು ಪಾಂಡವರ ತಾಯಿ ಬೇರೂ ತಾಯಿ ಅರುಂಧತಿಯೇ ಎಂಬುದನ್ನೂ ಈ ಜಗದ ಯಾವ ಶಾಸ್ತ್ರ ಪುರಾಣಗಳೂ ಅಲ್ಲಗಳೆಯಲಾರವು. ಕುರು ಪಾಂಡವರೂ ಮಾದಿಗ ಕುಲ ಸಂಜಾತರು ಎಂಬುದು ಸೂರ್ಯ ಚಂದ್ರನಷ್ಟೇ ಸತ್ಯ. ಸಂಗೀತ ಲೋಕದ ಪಿತಾಮಹಾ, ಸಪ್ತಸ್ವರಗಳ ಕತೃ ಮಾತಂಗ ಮುನಿ ಮಾದಿಗ ಕುಲದ ಕಿರೀಟ.
ಅಪ್ಪನು ನಮ್ಮ ಮಾದರ ಚನ್ನಯ್ಯ ಎಂದವರು ಜಗಜ್ಯೋತಿ ಬಸವಣ್ಣ. ಹನ್ನೊಂದನೆ ಶತಮಾನದ ತಮಿಳುನಾಡಿನ ರಾಜ ಕರಿಕಾಲ ಚೋಳನ ಸೊಕ್ಕಿನ ಶಿವಭಕ್ತಿಯನ್ನು ತನ್ನ ಗುಪ್ತ ಭಕ್ತಿಯ ಮೂಲಕ ಅಡಗಿಸಿ, ಜಗದ ಸಮಸ್ತರಿಗೂ ನಿಜ ಭಕ್ತಿಯ ಶಕ್ತಿ ಏನೆಂದು ತೋರಿದವನು ನಮ್ಮ ಆದ್ಯ ವಚನಕಾರ ಮಾದರ ಚನ್ನಯ್ಯ.
ಅಣ್ಣ ಬಸವಣ್ಣನ ತಲೆ ಏರಿದ್ದ ಪಾದುಕೆಗಳು ಹುಟ್ಟಿದ್ದು ಸಮಾಗಾರ ಹರಳಯ್ಯನ ತೊಡೆಯ ಚರ್ಮದಿಂದ. ಭಕ್ತಿ ಭಂಡಾರಿ ಬಸವಣ್ಣನನ್ನೇ ಎರಡು ಬಾರಿ ಶರಣು ಶರಣಾರ್ಥಿ ಹೇಳಿಸಿ ಕೃತಾರ್ಥರಾಗಿದ್ದ ಆದಿಗ ಕುಲದ ಹೆಮ್ಮೆ ನಮ್ಮ ಹರಳಯ್ಯ. ಸಂತ ರವಿದಾಸ ಪರಂಪರೆ ಮಾದಿಗರ ಬಹುದೊಡ್ಡ ಸಾಂಸ್ಕೃತಿಕ ಹೆಗ್ಗುರುತು. ಸ್ವತಂತ್ರ ರಾಜ್ಯವನ್ನು ಕಟ್ಟಿ ದೇಶವನ್ನಾಳಿದ ಪ್ರಪ್ರಥಮ ದೊರೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ರಾಜ ಕುರಂಗನು ಮಾದಿಗರ ಕುಲತಿಲಕನು. ಬಸವಣ್ಣನೂ ಮಾದಿಗ ಕುಲ ಸಂಜಾತನೆಂದು ಇತ್ತೀಚಿನ ಸಂಶೋಧನೆಗಳೂ ಒಂದು ಬೆಳಕು ಚೆಲ್ಲಿ ಹೋದವು. ಮಲೆಯ ಮಾದೇಶ್ವರ ಮಾದಿಗ ಪುರುಷನೆಂದು ಅನೇಕ ಸಂಶೋಧಕರು ಸಾಧಿಸಿ ಹೇಳಿದ್ದಾರೆ. ಮರುಳು ಸಿದ್ದ ಯೋಗಿಗಳು ಮಾದಿಗರೆಂದು ಅನೇಕ ದಾಖಲೆಗಳಲ್ಲಿ ಕಂಡುಬಂದಿವೆ. ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿ ರಾಷ್ಟ ರಾಜಕಾರಣದಲ್ಲಿ ಅಜರಾಮರರಾಗಿ ಉಳಿದಿರುವ ಜಗಜೀವನ ರಾಮರು ಈ ಸಮಾಜದ ಸಾಕ್ಷಿಪ್ರಜ್ಞೆ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟಿ ಹಾಕುವ ಮೂಲಕ ಹೋರಾಟದ ಶಕ್ತಿಯಾದವರು ಪ್ರೊ. ಬಿ. ಕೃಷ್ಣಪ್ಪನವರು
-ಹೀಗೆ ಪಟ್ಟಿ ಮಾಡುತ್ತಾ ಹೋದರೆ ಒಂದಲ್ಲ ಎರಡಲ್ಲ. ಮಾದಿಗಕುಲ ಹೆಮ್ಮೆ ಪಡುವಂತಹ ನೂರಾರು, ಸಾವಿರಾರು, ಉದಾಹರಣೆಗಳು ಸಿಗುತ್ತವೆ. ಆದರೇ, ಇವತ್ತು ಏನಾಗಿದೆ? ಸದಾಶಿವ ಅಯೋಗದ ವರದಿಯನ್ನು ಜಾರಿಮಾಡಿ, ಆ ಮೂಲಕ ನಮಗೆ ಸಮಾನತೆ ನೀಡಿ, ಹಕ್ಕು ಕೊಡಿ, ನ್ಯಾಯ ಕೊಡಿ ಎಂದು ಅಂಗಲಾಚಿ ನಿಂತಿದೆ.
ಬಂದ ಬಂದವರಿಗೆಲ್ಲಾ ಅನ್ನ ನೀರು ನೆರಳು ಕೊಟ್ಟು ಸಾಕಿ ಸಲಹಿದ ಘನತೆಯ ತಾಯಿ ಹೃದಯಿ ಸಮುದಾಯ ಮಾದಿಗ ಸಮುದಾಯ. ಆದರೇ ಇವತ್ತಿಷ್ಟು ಧೈನೇಸಿ ಸ್ಥಿತಿಗೆ ತಲುಪಿದ್ದಾದರೂ ಯಾಕೆ? ಸದಾಶಿವ ಅಯೋಗದ ನಂತರ ಬಂದ ಅದೆಷ್ಟು ಆಯೋಗದ ವರದಿಗಳು ಸದ್ದಿಲ್ಲದೆ ಜಾರಿಯಾಗಿವೆ. ಆ ವರದಿಗಳ ಜಾರಿಗೆ ಬೇಕಿಲ್ಲದ ಸಾರ್ವಜನಿಕ ಚರ್ಚೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ನಾಟಕದ ಮಾತುಗಳು ಸದಾಶಿವ ಆಯೋಗದ ವರದಿ ಜಾರಿಗೆ ಮಾತ್ರ ಹೇಗೆ ಅನ್ವಯಿಸುತ್ತವೆ? ಎಂದು ಯಾರಲ್ಲೂ ಉತ್ತರವಿಲ್ಲ.
ಕಳೆದ ೩೨ ವರ್ಷಗಳಿಗೂ ಹೆಚ್ಚಿನ ಸಮಯದಿಂದ ಒಳಮೀಸಲಾತಿ ಹಕ್ಕಿನ ಒಂದು ಚಳುವಳಿ ನಿರಂತರವಾಗಿ, ಒಂದು ಅರಣ್ಯರೋಧನವಾಗಿ ನಡೆದುಕೊಂಡು ಬರುತ್ತಿದೆ. ಆದರೇ ಕೇವಲ ಇತ್ತೀಚಿನ ಬೇರೆಬೇರೆ ವರದಿಗಳು ಸದ್ದಿಲ್ಲದೆ ಜಾರಿಯಾಗುತ್ತವೆ ಎಂದರೇ ಇದಕ್ಕಿಂತ ದುರಂತ ಇನ್ನೇನಿದೆ? ನಾಗಮೋಹನ್ ದಾಸ್ ವರದಿ, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಪೂರಕವಾಗಿ ಕೊಟ್ಟ ವರದಿಗೆ ಅತ್ಯಲ್ಪ ಕಾಲದಲ್ಲೇ ಸಿಕ್ಕ ಮಾನ್ಯತೆ, ಒಳಮೀಸಲಾತಿ ಹೋರಾಟಕ್ಕೆ ಯಾಕಿಲ್ಲ?
ಇದಕ್ಕೆಲ್ಲ ಕಾರಣ ಬಾಬಾ ಸಾಹೇಬರು ಹೇಳಿದಂತ ರಾಜಕಾರಣದ ಶಕ್ತಿ ಏನೆಂದು ದೇವೇಗೌಡರಿಗೆ, ಸಿದ್ದರಾಮಯ್ಯನವರಿಗೆ ಅರ್ಥ ಆಗಿ, ಅದರ ಅರಿವು ಆ ಸಮುದಾಯಕ್ಕೂ ದಕ್ಕಿದಂತೆ, The Ultimate ರಾಜಕೀಯ ಶಕ್ತಿಯ ತಾಕತ್ತಿನ ಅರಿವು ಮಾದಿಗ ಸಮುದಾಯಕ್ಕಿನ್ನೂ ಆಗಿಲ್ಲದಿರುವುದೇ ಆಗಿದೆ. ಮಾದಿಗರು ಎಲ್ಲಿಯವರೆಗೂ ಪ್ರಬಲ ರಾಜಕೀಯ ನಿರ್ಣಾಯಕ ಶಕ್ತಿ ಆಗುವುದಿಲ್ಲವೋ ಅಲ್ಲಿಯವರೆಗೂ ಈ ದುರಂತಕ್ಕೆ ಅಂತ್ಯ ಇಲ್ಲವೇ ಇಲ್ಲ. ಇಂತಹ ಇನ್ನು ಹತ್ತು ಹಲವು ಅನುಮಾನಗಳಿಗೆ, ಪ್ರಶ್ನೆಗಳಿಗೆ ಈ ಪುಸ್ತಕವು ಉತ್ತರ ಕೊಡುತ್ತಾ ಹೋಗುತ್ತದೆ. ಮತ್ತು ಮಾದಿಗರ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಪೌರಾಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು ಮತ್ತು ಔದ್ಯೋಗಿಕ ಸ್ಥಿತಿಗತಿಗಳನ್ನು ತಿಳಿಸಿಕೊಡುವ ಆಯಾಕಾಲದ ಅಗತ್ಯ ಮಾತುಕತೆಗಳು, ಮಾಹಿತಿ ಮತ್ತು ಹೋರಾಟದ ನುಡಿಗಳನ್ನು ಈ ಪುಸ್ತಕ ನುಡಿಯುತ್ತದೆ ದಯಮಾಡಿ ಮುಂದುವರೆಯಿರಿ…
ಬಿ.ಆರ್.ಭಾಸ್ಕರ್ ಪ್ರಸಾದ್
ಲೇಖಕರು, ಸಾಮಾಜಿಕ ಹೋರಾಟಗಾರರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಸೋಶಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)