ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಭರಾಟೆ ಜೋರಾಗಿದೆ. ಮೂರು ಪ್ರಬಲ ಪಕ್ಷಗಳಲ್ಲಿ ಎರಡಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಹಣಾಹಣಿ ಇದ್ದೇ ಇದ್ದು, ಸೂಕ್ತ ಅಭ್ಯರ್ಥಿಗಳನ್ನು ಆರಿಸುವಲ್ಲಿ ಆಯಾ ಪಕ್ಷಗಳ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸುವಲ್ಲಿ ಯಾವುದೇ ಅನುಮಾನವಂತೂ ಇಲ್ಲವೇ ಇಲ್ಲ.
ಈ ನಿಟ್ಟಿನಲ್ಲಿ ನೋಡುವುದಾದರೆ ಜೆಡಿಎಸ್, ಬಿಜೆಪಿ ಪಕ್ಷಗಳಲ್ಲಿ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳ ಪಟ್ಟಿಯೇ ಇದ್ದರೆ, ಕಾಂಗ್ರೆಸ್ ಪಕ್ಷದಲ್ಲಂತೂ ಆಕಾಂಕ್ಷಿಗಳ ದೊಡ್ಡ ದಂಡೆ ಇದೆ. ಪ್ರತಿದಿನ ವಿವಿಧ ಪಕ್ಷಗಳೊಳಗೆ ಇರುವ ಬಣದ ರಾಜಕೀಯ ಚಟುವಟಿಕೆಗಳಿಗೆ ದೇವನಹಳ್ಳಿ ಕ್ಷೇತ್ರ ಸಾಕ್ಷಿಯಾಗುತ್ತಿದೆ.
ಹೊಸ ಮುಖ ಈ ಸಾರಿ ತೆನೆ ಹೊರುವುದೇ?
ಇತ್ತ ಜೆಡಿಎಸ್ ಪಕ್ಷ ಇದ್ದಷ್ಟೂ ಶತಮಾನ ನಾನೇ ಶಾಸಕ ಎಂದು ಬೀಗುತ್ತಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ನಿಟ್ಟುಸಿರು ಬಿಟ್ಟಿದ್ದರು. ಅದಕ್ಕೆ ಕಾರಣವೇನೆಂದರೆ, ಇತ್ತೀಚೆಗೆ ಜೆಡಿಎಸ್ ತನ್ನ ಸಾಂಭವ್ಯ ಪಟ್ಟಿ ಬಿಡುಗಡೆ ಮಾಡಿದಾಗ ದೇವನಹಳ್ಳಿ ಕ್ಷೇತ್ರದಿಂದ ನಿಸರ್ಗ ನಾರಾಯಣ ಸ್ವಾಮಿ ಅವರ ಒಬ್ಬರ ಹೆಸರು ಮಾತ್ರ ಇತ್ತು. ಇದರಿಂದ ʼನೂರು ವರ್ಷಕ್ಕೂ ನಾನೇʼ ಎಂಬಷ್ಟು ಆತ್ಮವಿಶ್ವಾಸದಲ್ಲೇ ನೆಮ್ಮದಿಯಾಗಿದ್ದ ಹಾಲಿ ಶಾಸಕರಿಗೆ ಕಳೆದ ವಾರ ಪಕ್ಷದ ಭಿನ್ನ ಬಣದ ಎಂಟ್ರಿಯಿಂದ ಈಗ ತಲೆನೋವಾಗಿ ಪರಿಣಮಿಸಿದೆ.
ಹೌದು, ಜೆಡಿಎಸ್ನ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೇ ಟಿಕೆಟ್ ಎಂದು ಈಗಾಗಲೇ ಪಟ್ಟಿ ಬಿಡುಗಡೆ ಮಾಡಲಾಗಿದ್ದರೂ, ಭಿನ್ನಬಣದ ಬಳ್ಳಾರಿ ಮೂಲದ ಚುನಾವಣಾ ಸಮಾಜ ಸೇವಕ ವಿ ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ತೆರೆಮರೆಯಲ್ಲೇ ತಯಾರಿ ನಡೆಸಿರುವುದು ಹೊಸ ಬೆಳವಣಿಗೆ. ತನ್ನದೇ ಪಕ್ಷದಲ್ಲಿ ಪೈಪೋಟಿಗೆಂದು ಯಾರೆಂದರೆ ಯಾರೂ ಇಲ್ಲವೆಂದು ನೆಮ್ಮದಿಯಾಗಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಈ ನಡೆ ಗಲಿಬಿಲಿಗೆ ಕಾರಣವಾಗಿದೆ ಎಂಬ ಮಾತು ದೇವನಹಳ್ಳಿ ಕ್ಷೇತ್ರದಾದ್ಯಂತ ಬಿಸಿಬಿಸಿ ಚರ್ಚೆಯಾಗುತ್ತಿದೆ. ಭಿನ್ನಬಣದ ಮುಖಂಡತ್ವ ವಹಿಸಿರುವ ಕೆಲವು ಮುಖಂಡರುಗಳು ಹೇಳುವ ಪ್ರಕಾರ, ಬದಲಾವಣೆ ಜಗದ ನಿಯಮ. ಎಲ್ಲವೂ ದಿನ ಕಳೆದಂತೆ ಬದಲಾಗಲೇಬೇಕು. ಅದರಂತೆ ಜೆಡಿಎಸ್ ಪಕ್ಷದಲ್ಲಿಯೂ ಕೂಡ ಮುಂದಿನ ಚುನಾವಣೆಯಲ್ಲಿ ನಾಯಕತ್ವ ಬದಲಾಗಲಿದೆ ಇದನ್ನು ಯಾರು ತಪ್ಪಿಸಲಾಗದು. ಕಳೆದ ಬಾರಿ ಪಿಳ್ಳಮುನಿಶಾಮಪ್ಪ ಅವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿ ನಿಸರ್ಗ ನಾರಾಯಣಸ್ವಾಮಿ ಅವರ ಪಾಲಾದಂತೆ, ಈ ಬಾರಿ ಕೂಡ ವಿ ಮಂಜುನಾಥ್ ಅವರಿಗೇ ಟಿಕೆಟ್ ಸಿಗಲಿದೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ.
ʼನನ್ನನ್ನು ದೇವನಹಳ್ಳಿ ಕ್ಷೇತ್ರದಲ್ಲಿ ಮುಂದಿನ 100 ವರ್ಷಕ್ಕೂ ಯಾರು ಸೋಲಿಸಲಾರರು, ನೂರು ವರ್ಷಕ್ಕೂ ಇಲ್ಲಿ ನಾನೇ ಶಾಸಕ. ಅಥವಾ ನಾನು ಯಾರನ್ನು ಜನತೆಯ ಮುಂದೆ ನಿಲ್ಲಿಸಿ, ಇವರನ್ನು ಗೆಲ್ಲಿಸಿ ಎಂದು ಹೇಳುತ್ತೇನೆಯೋ ಅವರನ್ನೇ ಈ ಕ್ಷೇತ್ರದ ಜನತೆ ಆರಿಸಿ ವಿಧಾನಸಭೆಗೆ ಕಳಿಸುತ್ತಾರೆ. ನನ್ನ ಹೊರತಾಗಿ ಇಲ್ಲೇನು ನಡೆಯುವುದಿಲ್ಲʼ ಎಂಬ ಓವರ್ ಆಟಿಟ್ಯೂಡ್ ಹೇಳಿಕೆ ನೀಡಿ ವಿವಾದಕ್ಕಿಡಾಗಿದ್ದರು. ಈ ವಿಚಾರ ವಿಧಾನ ಸೌಧದ ಪಡಸಾಲೆಯಲ್ಲೂ ನಗೆಪಾಟಲಿಗೀಡಾಗಿತ್ತು. ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷದಲ್ಲಿಯೂ ವಿರೋಧ ವ್ಯಕ್ತವಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಈ ಹೇಳಿಕೆಯ ವಿರುದ್ಧ ಪತ್ರಿಕಾ ಹೇಳಿಕೆ ನೀಡಿ ಖಂಡಿಸಲಾಗಿತ್ತು. ಆಗ ಚಾನ್ಸ್ ಸಿಕ್ಕಿದ್ದೇ ತಡ ಜೆಡಿಎಸ್ ನ ಭಿನ್ನಮಣದ ಮುಖಂಡರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಜೆಡಿಎಸ್ ನ ಭಿನ್ನಮಣದ ಗುಂಪು ಈಗ ಸಕ್ರಿಯವಾಗಿ ಅಖಾಡಕ್ಕೆ ಇಳಿದು, ವಿ ಮಂಜುನಾಥ್ ಅವರಿಗೆ ಟಿಕೆಟ್ ತರುವುದು ಶತಸಿದ್ಧ ಎಂದು ತೊಡೆ ತಟ್ಟಿನಿಂತಿದೆ. ಹೀಗಾಗಿ ಜೆಡಿಎಸ್ನ ತೆನೆ ಹೊರುವವರು ಯಾರು ಎಂಬುದನ್ನು ಕೊನೆಯ ಓವರ್ನ ಕೊನೆಯ ಬಾಲಿನ ಆಟದ ವರೆಗೂ ಕಾಯುವುದು ಅನಿವಾರ್ಯವಾಗಿದೆ.
ಕೆ ಹೆಚ್ ಹೆಸರು ಎಂಟ್ರಿ; ಕಾಂಗ್ರೆಸ್ ಆಕಾಕ್ಷಿಗಳ ಪಾಳಯ ಥಂಡಾ!
ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಅತಿ ಹೆಚ್ಚಿನವರು ಭೋವಿ ಸಮುದಾಯದವರು. ಅಸಲಿಗೆ ದೇವನಹಳ್ಳಿಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯ ಮತದಾರರು ಇರುವುದು ಮಾದಿಗ ಸಮುದಾಯದವರು. ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಒಳಮೀಸಲಾತಿಯ ಕೂಗು ಕೇಳಿಬರುತ್ತಿದೆ. ಭೋವಿ ಸಮುದಾಯದ ಬಹುತೇಕ ಜನ ಒಳಮೀಸಲಾತಿ ಜಾರಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗೆ ಇದು ನುಂಗಲಾರದ ತುತ್ತಾಗಿದ್ದು, ಗೆದ್ದು ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳಲೇ ಬೇಕಿರುವ ಜರೂರತ್ತೂ ಇದೆ. ಈ ಕಾರಣದಿಂದ ಮಾದಿಗ ಸಮುದಾಯದವರೇ ಆಗಿದ್ದು, ಕಾಂಗ್ರೆಸ್ಸಿನ ಪ್ರಬಲ ನಾಯಕರೂ ಆಗಿರುವ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪನವರ ಹೆಸರು ಥಟ್ಟನೇ ಕಾಣಿಸಿಕೊಂಡುಬಿಟ್ಟಿದೆ. ಇದನ್ನು ನೋಡಿ ಕಾಂಗ್ರೆಸ್ ನ ಬಹುತೇಕ ಆಕಾಂಕ್ಷಿಗಳು ಒಮ್ಮೆಲೆ ಆಕ್ಸಿಜನ್ ಕಳಕೊಂಡವರಂತೆ ತಣ್ಣಗಾಗಿ ಹೋಗಿದ್ದಾರೆನ್ನಬಹುದು.
ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಸಿ, ಗೆದ್ದ ಯಾವ ಶಾಸಕರಿಗೂ ಈ ವರೆಗೂ ಒಂದೇ ಒಂದು ಮಂತ್ರಿ ಪದವಿ ಸಿಕ್ಕಿಲ್ಲ. ಕೆ.ಹೆಚ್. ಗೆದ್ದರೆ, ಅವರಿಗೆ ಮಂತ್ರಿಗಿರಿ ನಿರಾಯಾಸವಾಗಿ ಸಿಕ್ಕಿಬಿಡುತ್ತದೆ, ಅವರನ್ನೇ ಯಾಕೆ ಗೆಲ್ಲಿಸಬಾರದು ಎಂಬ ಮಾತು ಈಗಾಗಲೇ ದೇವನಹಳ್ಳಿ ಕ್ಷೇತ್ರದ ಮೂಲೆ ಮೂಲೆಯನ್ನು ತಟ್ಟುತ್ತಿದೆ. ಇದರ ನಡುವೆ, ಕಳೆದ ಎರಡು ಮೂರು ವರ್ಷಗಳಿಂದ ಚುನಾವಣೆಯ ದೃಷ್ಟಿಯಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಮಂದಿರ, ಮಸೀದಿಗಳ ಧಾರ್ಮಿಕ ಕಾರ್ಯಕ್ರಮಗಳೂ ಸೇರಿದಂತೆ, ವಿವಿಧ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಾ ಪತ್ರಿಕೆಗಳಲ್ಲಿ ಮಿಂಚಿದ ಕಾಂಗ್ರೆಸ್ಸಿನ “ಚುನಾವಣಾ ಸಾಮಾಜಿಕ ಕಾರ್ಯಕರ್ತ” ಮುಖಂಡರುಗಳು ಕೋಟಿ ಕೋಟಿ ಖರ್ಚು ಮಾಡಿ, ಈಗ ಧುತ್ತನೆ ಬಂದ ಕೆಎಚ್ ಅವರ ಹೆಸರನ್ನು ನೋಡಿ ಹೌಹಾರಿ ಬೀಲ ಸೇರಿಕೊಂಡಂತೆ ಭಾಸವಾಗುತ್ತಿದ್ದಾರೆ.
ಕಾಂಗ್ರೆಸ್ನ ಇತರ ಟಿಕೆಟ್ ಆಕಾಂಕ್ಷಿಗಳು ಈ ಕೆಳಗಿನಂತಿದೆ:
ಮಾಜಿ ಶಾಸಕ
ಮಾಜಿ ಶಾಸಕ
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಬಿಜೆಪಿಗೆ ಪಿಳ್ಳಮುನಿಶಾಮಪ್ಪ ಟ್ರೆಂಡ್ ಸೃಷ್ಟಿಸುವರೇ?
ಹೇಳಿಕೇಳಿ ದೇವನಹಳ್ಳಿ ಬಿಜೆಪಿಯ ಪ್ರಬಲ ಕ್ಷೇತ್ರವಲ್ಲ. ಈ ಕ್ಷೇತ್ರದ ಒಂದೆರಡು ಗ್ರಾಮಪಂಚಾಯ್ತಿ ಸೀಟುಗಳು ಬಿಜೆಪಿ ಪಾಲಾಗಿದ್ದರೂ, ಅದು ರಾಷ್ಟ್ರನಾಯಕ ಅಥವಾ ರಾಜ್ಯ ನಾಯಕರ ವರ್ಚಸ್ಸಿನಿಂದ ಅಲ್ಲ. ಈ ಕ್ಷೇತ್ರದ ಜನ ಹಾಗೆಲ್ಲಾ ಯಾವುದಕ್ಕೂ ಮಣೆ ಹಾಕುವವರೂ ಅಲ್ಲ. ಅವರೇನಿದ್ದರೂ ಸ್ಥಳೀಯ ಮುಖಂಡ, ಆತನ ಕೆಲಸಗಳನ್ನು ನೋಡಿಯೇ ಓಟ್ ಹಾಕುವವರು. ಹೀಗಿರುವಾಗ, ಕಳೆದ ಬಾರಿ ಶಾಸಕರಾಗಿದ್ದ ಪಿಳ್ಳಮುನಿಶಾಮಪ್ಪ ಅವರಿಗೆ ಕೊನೆ ಗಳಿಗೆಯಲ್ಲಿ ಜೆಡಿಎಸ್ ಟಿಕೆಟ್ ತಪ್ಪಿಹೋಗಿ, ಅದು ನಿಸರ್ಗ ನಾರಾಯಣಸ್ವಾಮಿ ಅವರ ಪಾಲಾಗಿ ಅವರು ಗೆದ್ದು ಶಾಸಕರಾಗಿದ್ದರು. ಇದರಿಂದ ಬೇಸತ್ತ ಪಿಳ್ಳಮುನಿಶಾಮಪ್ಪ ಅವರು ಕೆಲಕಾಲ ತಟಸ್ಥವಾಗಿದ್ದು, ತೀರಾ ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದರು.
ಈ ಮೊದಲೇ ಹೇಳಿದಂತೆ ಈ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಬಾರಿ ಆಟಕುಂಟು ಲೆಕ್ಕಕ್ಕಿಲ್ಲ. ಕಳೆದಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಕೆಪಿ ನಾಗೇಶ್ ಅವರು ಸೋಲುವುದಕ್ಕಾಗಿಯೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳ ಜತೆ ಒಳೊಪ್ಪಂದ ಮಾಡಿಕೊಂಡು ಕಾಸು ಜೇಬಿಗಿಳಿಸಿ ನಿರುಮ್ಮಳವಾಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಈ ಪರಿಸ್ಥಿತಿಯಲ್ಲಿ ಓಬದೇನಹಳ್ಳಿ ಮುನಿಯಪ್ಪ ಅವರು ಕೂಡ ಸಮಾಜ ಸೇವೆಯ ವೇಷದಲ್ಲಿ ಬಿಜೆಪಿಯೊಳಗೆ ಸೇರಿಕೊಂಡು, ಹಾಲಿ ಶಾಸಕರಿಗೆ ಬಿ ಟೀಂ ಆಗಿ ಕೆಲಸ ಮಾಡುತ್ತಾರೆ ಎಂಬ ಆರೋಪ ಕೂಡಾ ಇದೆ.
ಇದರ ನಡುವೆ ದೇವನಹಳ್ಳಿಯ ಬಿಜೆಪಿಯಲ್ಲಿ, ತಳಮಟ್ಟದ ಕಾರ್ಯಕರ್ತರ ಕೊರತೆ ಮತ್ತು ದುಡ್ಡು ಖರ್ಚು ಮಾಡುವವರ ಕೊರತೆಯೂ ಇದ್ದು, ಆ ಪಕ್ಷಕ್ಕೆ ಹೇಳಿಕೊಳ್ಳುವಂತಹ ಸಂಘಟನಾ ಶಕ್ತಿಯೂ ಇಲ್ಲ. ಆದರೂ, ಪಿಳ್ಳ ಮುನಿಶಾಮಪ್ಪನವರು ಕ್ಷೇತ್ರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಮಾದಿಗ ಸಮುದಾಯದವರಾಗಿದ್ದು, ಜೆಡಿಎಸ್ ನಲ್ಲಿ ಶಾಸಕರಾಗಿದ್ದಾಗ ಹೆಸರು ಕೆಡಿಸಿಕೊಳ್ಳದ ಕಾರಣ ಮತ್ತು ಕಾಂಗ್ರೆಸ್ನಲ್ಲಿ ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿರುವ ಭೋವಿ ಸಮುದಾಯದ ಆಕಾಂಕ್ಷೆಗಳೇ ತುಂಬಿರುವ ಕಾರಣ, ಕಾಂಗ್ರೆಸ್ ಟಿಕೆಟ್ ಭೋವಿ ಸಮುದಾಯದ ಮುಖಂಡರ ಪಾಲಾಗಿಬಿಟ್ಟರೆ ಅದರ ಲಾಭವಾಗುವುದು ಬಿಜೆಪಿಗೆ! ಅಂಥ ಒಂದು ಟ್ರೆಂಡ್ ಅನ್ನು ಕಾಂಗ್ರೆಸ್ ತಾನೇ ತಾನಾಗಿ ಸೃಷ್ಟಿಸಿಬಿಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಮಾಜಿ ಶಾಸಕ
ಮೊದಲೇ ಹೆಸರು ಮಾಡಿರುವ ಪಿಳ್ಳಮುನಿಶಾಮಪ್ಪ ಈ ಕ್ಷೇತ್ರದಲ್ಲಿ ಶ್ರಮಪಟ್ಟು, ಎಲೆಕ್ಷನ್ ಸಮಯದಲ್ಲಿ ಓಡಾಡಿದರೆ, ಅವರ ಗೆಲುವು ಬಹಳ ಕಷ್ಟವೇನಲ್ಲ ಎಂಬ ಅಭಿಪ್ರಾಯಗಳಿಂದ ಬಿಜೆಪಿ ಕಾರ್ಯಕರ್ತರು ವಿಶ್ವಾಸದಲ್ಲಿದ್ದರು. ಆದರೆ ಈ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಕೆಎಚ್ ಮುನಿಯಪ್ಪನವರ ಎಂಟ್ರಿಯಾಗುವ ಲಕ್ಷಣ ಕಂಡುಬಂದಿರುವ ಕಾರಣ ಈ ಬಾರಿ ಬಿಜೆಪಿ ಟ್ರೆಂಡ್ ಸೃಷ್ಟಿಸುತ್ತದೆಂಬ ಹೈಪ್ ಪ್ಲಾಪ್ ಆದಂತೆ ಕಂಡು ಬರುತ್ತಿದೆ.
ಒಟ್ಟಿನಲ್ಲಿ ಟಿಪ್ಪು ಹುಟ್ಟಿದ ದೇವನಹಳ್ಳಿ ವಿಧಾನ ಕ್ಷೇತ್ರದ ಚುನಾವಣೆ ಈ ಬಾರಿ ಕೇವಲ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಮತದಾರರಿಗೂ ಚಕ್ರವ್ಯೂಹವಾಗಿ ಮಾರ್ಪಟ್ಟಿದೆ. ನಿಸರ್ಗ ನಾರಾಯಣ ಸ್ವಾಮಿ ಹಾಲಿ ಶಾಸಕ, ಪಿಳ್ಳಮುನಿಶಾಮಪ್ಪ ಹೆಸರು ಕೆಡಿಸಿಕೊಳ್ಳದ ಒಳ್ಳೆಯ ಮನುಷ್ಯ, ಕೆ.ಹೆಚ್. ಕ್ಷೇತ್ರಕ್ಕೆ ಹೊರಗಿನವರಾದರೂ ಹೆಚ್ಚಿನ ಮತದಾರರ ಸಮುದಾಯದ ಅಭ್ಯರ್ಥಿ, ಜತೆಗೆ ಮಂತ್ರಿಗಿರಿ ಸಿಕ್ಕುವ ಸಂಭವ ಬೇರೆ… ಇವೆಲ್ಲಾ ವರ್ತುಲಗಳನ್ನು ದಾಟಿ ಮತದಾರ ಯಾರನ್ನು ಆರಿಸಿಕೊಳ್ಳುತ್ತಾನೆ ಎಂದು ನೋಡಬೇಕಿದೆ. ಅದರ ಜತೆಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೂ ಅಭ್ಯರ್ಥಿ ಆಯ್ಕೆಯ ಜಟಿಲತೆಯೂ ಇದೆ. ಇದೆಲ್ಲದರ ನಡುವೆ ಆಮ್ ಆದ್ಮಿ ಪಕ್ಷ ಕೂಡಾ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದು, ಯಾವ ಪಕ್ಷಕ್ಕೆ ಮತಗಳ ಕೊರತೆಯಾಗಬಹುದೆಂಬ ಲೆಕ್ಕಾಚಾರದಲ್ಲಿ ಚುನಾವಣಾ ಪಂಡಿತರು ಬ್ಯುಸಿಯಾಗಿದ್ದಾರೆ.
ವರದಿ: ಎಂ ಹೈದರ್,
ಪತ್ರಕರ್ತರು, ದೇವನಹಳ್ಳಿ