ಮರೆಯಾದ ₹2000 ನೋಟಿನ ಕಥೆಯನ್ನು ಹೇಳುವುದಾದರೆ.. ನವೆಂಬರ್ 8, 2016ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಚಾಲ್ತಿಯಲ್ಲಿದ್ದ ₹500 ಮತ್ತು ₹1000 ಮುಖ ಬೆಲೆಯ ಎಲ್ಲಾ ನೋಟುಗಳನ್ನು (Demonitise)ರದ್ದು ಪಡಿಸುವ ತೀರ್ಮಾನವನ್ನು ಘೋಷಿಸುತ್ತಾ ಅದಕ್ಕೆ ಕೊಟ್ಟ ಮುಖ್ಯ ಕಾರಣಗಳು ನಕಲಿ ನೋಟುಗಳ ತಡೆ, ಕಪ್ಪ‌ ಹಣದ ನಿಯಂತ್ರಣ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹರಿಯುತಿದ್ದ ಹಣದ ನಿಯಂತ್ರಣ. ಆದರೆ, ಈಗ ಈ ಎಲ್ಲಾ ಸಮಸ್ಯೆಗಳು ಬಗೆಹರೆದಿವೆಯೆ? ಎನ್ನುವ ಪ್ರಶ್ನೆಯ ಜೊತೆಗೆ ಸಾವಿರ ಮುಖ್ಯ ಬೆಲೆಯ ನೋಟಿನ ಬದಲಾಗಿ ಮುದ್ರಣಗೊಂಡಿದ್ದ ₹2000 ಮುಖ ಬೆಲೆಯ ನೋಟಿಗಳು ಎಲ್ಲಿ ಮಾಯವಾದವು? ಎಂಬ ಪ್ರಶ್ನೆಯು ಮೂಡಿದೆ. ಏಕೆಂದರೆ ಯಾವುದೆ ATM ಕೇಂದ್ರಗಳಲ್ಲಾಗಲಿ, ಬ್ಯಾಂಕುಗಳಲ್ಲಾಗಲಿ ಈ ನೋಟುಗಳು ಸಿಗುತ್ತಿಲ್ಲಾ ಹಾಗು ಜನಸಾಮಾನ್ಯರ ನಡುವೆ ಈ ನೋಟಿನ ಚಲಾವಣೆಯಂತೂ ಇಲ್ಲವೆ ಇಲ್ಲ! ಹಾಗಾದರೆ, ₹2000 ನೋಟಗಳ ಕಥೆ ಏನಾಗಿದೆ?

2016ಕ್ಕಿಂತ ಮೊದಲು ದೇಶದಲ್ಲಿ ಒಟ್ಟು ಚಾಲನೆಯಲ್ಲಿದ್ದ ವಿವಿಧ ಮುಖ ಬೆಲೆಯ ನೋಟುಗಳ ಪೈಕಿ ಶೇಕಡಾ 80% ರಷ್ಟು ನೋಟುಗಳು ₹500 ಮತ್ತು ₹1000 ನೋಟುಗಳು ಆಗಿದ್ದವು. ಹಾಗಾಗಿ Demonetization ನಂತರ ಅಷ್ಟು ಮೊತ್ತವನ್ನು ಕಡಿಮೆ ಸಮಯದಲ್ಲಿ ಸರಿದೂಗಿಸಲು ದೊಡ್ಡ ಮುಖ ಬೆಲೆಯಾದ ₹2000 ನೋಟುಗಳನ್ನು ಮುದ್ರಿಸಲಾಯಿತು ಎಂದು RBI ಹೇಳುತ್ತದೆ. ಮಾರ್ಚ್ 31, 2017 ರಷ್ಟಿಗೆ ₹2000 ಮುಖ ಬೆಲೆಯ ನೋಟುಗಳ ಚಲಾವನೆಯು 50.2 % ರಷ್ಟಾಗಿತ್ತು, ಅಂದರೆ 2017 ರಿಂದ 2021 ರ ನಡುವೆ 1,217.33 ಕೋಟಿ ₹2000 ಬೆಲೆಯ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. RBI ನ ವರದಿಯ ಪ್ರಕಾರ FY20, FY21, FY22 ರಲ್ಲಿ ₹2000 ಮುಖ ಬೆಲೆಯ ನೋಟುಗಳನ್ನು ಮುದ್ರಿಸಲಿಲ್ಲ. ಇದರ ಪರಿಣಾಮ ಮಾರ್ಚ್ 31, 2022 ರ ವೇಳೆಗೆ ಒಟ್ಟು ನೋಟುಗಳ ಪೈಕಿ ಕೇವಲ 13.8 % ₹ 2000 ಮುಖ ಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ಕೇಂದ್ರ ವಿತ್ತ ರಾಜ್ಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ರವರು ಮಾರ್ಚ್, 2021ರಲ್ಲಿ ಲೋಕಸಭೆಗೆ ಕೊಟ್ಟ ಮಾಹಿತಿಯ ಪ್ರಕಾರ ಮಾರ್ಚ್ 31, 2018 ರಷ್ಟಿಗೆ 3,362 ದಶಲಕ್ಷ ₹2000 ಮುಖ ಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಚಾಲನೆಯಲ್ಲಿದ್ದು ಅದು ಒಟ್ಟು ನೋಟುಗಳ ಸಾಂದ್ರತೆಯ ಪೈಕಿ 3.7% ಅಷ್ಟಾಗಿತ್ತು. ಹಾಗೆಯೆ ಫೆಬ್ರವರಿ 26, 2021 ರಷ್ಟಿಗೆ 2,499 ದಶಲಕ್ಷ ನೋಟುಗಳು ಚಾಲನೆಯಲ್ಲಿದ್ದು ಅದು ಒಟ್ಟು ನೋಟುಗಳ ಸಾಂದ್ರತೆಯ ಪೈಕಿ 2.01 % ಆಗಿತ್ತು, ಅದು ನವಂಬರ್ 26, 2021 ರಷ್ಷಿಗೆ 1.75 ಆಗಿದೆ.

ದೇಶಕ್ಕೆ ಒಳ್ಳೆಯದಾಗುತ್ತೆ ಎಂದು ತಿಂಗಳುಗಟ್ಟಲೆ ಬ್ಯಾಂಕುಗಳ ಮುಂದೆ ಕ್ಯೂ ನಿಂತು ಅನೇಕ ಜನರು ವಿವಿಧ ಸಮಸ್ಯೆಗಳನ್ನು ಎದುರಿಸಿ ಅನೇಕರು ಪ್ರಾಣವನ್ನೇ ತೆತ್ತರು ಆದರೆ ಇಂದು ಇದರರಿಂದ ನಮ್ಮ ದೇಶಕ್ಕೆ ಅಥವಾ ಜನರಿಗೆ ಒಳ್ಳೆಯದಾಗಿದೆಯೆ? NCRB ಅಂಕಿ ಅಂಶಗಳ ಪ್ರಕಾರ ₹ 2000 ಮುಖ ಬೆಲೆಯ ನೋಟುಗಳ ಕೋಟಾ ನೋಟುಗಳು ಹೆಚ್ಚಾಗಿವೆ, 2016ರಲ್ಲಿ 2,272 ಕೋಟಾ ನೋಟುಗಳು ಪತ್ತೆಯಾಗಿದ್ದವು ಅವು 2021 ರಷ್ಟಿಗೆ 2,44,834ಕ್ಕೆ ಏರಿಯಾಗಿದ್ದರೆ, ಇತ್ತ ಜನರ ಕೈಯಲ್ಲಿ ಮಾತ್ರ ಒಂದೇ ಒಂದು ನೋಟಿಲ್ಲ! ಮತ್ತೊಂದು ಕಡೆ ಕಪ್ಪು ಹಣ ಏನಾದರು ಬಿಳುಪಾಗಿ ಜನರ ಜೋಬಗಿ ಸೇರಿ ಹೊಳೆಯುತ್ತಿದ ಎಂದರೆ ಅದು ಇಲ್ಲ! ಹಾಗಾದರೆ ನಮ್ಮೆಲ್ಲರನ್ನೂ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ₹2000 ನೋಟುಗಳು ಎಲ್ಲಿ ಹೋದವು? ಎಂಬುದು, ಹಾಗದರೆ, ಆ ನೋಟುಗಳು ಉದ್ಯಮಿಗಳ ಖಜಾನೆ ಸೇರಿದ್ದಾವೆಯೆ? ಅಥವಾ ರಾಜಕಾರಣಿಗಳ ಮನೆ ಕಪಾಟುಗಳು ಸೇರಿವೆಯೆ? ಎಂಬ ಅನುಮಾನಕ್ಕೆ ಇನ್ನು ಮೂರು ತಿಂಗಳಲ್ಲಿ ಅಂದರೆ ಚುನಾವಣೆ ಸಂಧರ್ಭದಲ್ಲಿ ನಮಗೆ ಉತ್ತರ ಸಿಗಲಿದೆ! ಕಾದು ನೋಡೋಣ.

ಹರಿರಾಮ್. ಎ
ವಕೀಲರು

One thought on “ಎಲ್ಲಿ ಹೋದವೋ ₹2000 ನೋಟುಗಳು ಕಾಣದಾದವೋ?”
  1. ನಿಜವಾಗ್ಲೂ ಸರ್ ನಿಮ್ಮ ಆರ್ಟಿಕಲ್ ಓದಿದ್ ಮೇಲೆ ಯೋಚ್ನೆ ಬಂತು, ನಿಜವಾಗ್ಲೂ 2000ಮುಖ ಬೆಲೆ ನೋಟು ಚಲಾವಣೆಯಲ್ಲಿ ಇಲ್ಲ. ಜನರೆಲ್ಲಾ ಯೋಚ್ನೆ ಮಾಡೋ ವಿಚಾರ ಇದು.

Leave a Reply

Your email address will not be published. Required fields are marked *