ಬರ ಬರುತ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತನ್ನೋದು ಜನಜನಿತವಾದ ಮಾತು. ಈಗ ಮನುಷ್ಯನ ವಿಚಾರದಲ್ಲೂ ಸಹ ಹಾಗೇ ಹೇಳಬಹುದೇನೋ ಎಂಬ ಗುಮಾನಿ ಕಾಡುತ್ತದೆ. ಸಂವೇದನಾರಹಿತರಾಗಿ ಬದುಕುತ್ತಿರುವವರಲ್ಲಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ವಿಚಾರದಲ್ಲೂ ಸಹ ಸ್ಪಷ್ಟತೆ ಇಲ್ಲ ಮಾತಿನ ಭರದಲ್ಲಿ ಮೌಲ್ಯಯುತವಾದಂತಹ ಅರ್ಥವತ್ತಾದ ಸಂವಹನ ಕಲೆ ಮರೆತೇ ಹೋಗಿದೆ. ಮೊನ್ನೆ ಒಂದು ಟಿವಿ ಶೋ ತುಣುಕೊಂದನ್ನು ಯಾರೋ ವಾಟ್ಸಾಪ್ ಹರಿಬಿಟ್ಟಿದ್ದರು. ಪ್ರಸಿದ್ಧ ಟಿವಿಯೊಂದರ ಕನ್ನಡ ರಿಯಾಲಿಟಿ ಶೋ ಒಂದರ ಹಾಸ್ಯ ಕಾರ್ಯಕ್ರಮದಲ್ಲಿನ ತುಣುಕು. ಅದನ್ನು ನೋಡಿದ ನಂತರ ಆ ಹಾಸ್ಯಗಾರನೆಂಬ ಪೆಕರನ ಮಾತು ಕೇಳಿ ಅನ್ನಿಸಿದ್ದೇನೆಂದರೆ, ಈ ಟಿವಿಯವರು TRPಗಾಗಿ ಮತ್ತು ಹಣದ ಸಂಪಾದನೆಗಾಗಿ ಎಂತಹ ಕೀಳು ಅಭಿರುಚಿಯನ್ನು ಪ್ರೋತ್ಸಾಹಿಸುತ್ತಾ ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ಇಡೀ ಭಾರತದಲ್ಲಿಯೇ ಸಭ್ಯ ಜನರೆಂದೂ ಸಂಸ್ಕಾರವಿರುವ ಜನರೆಂದು ಹೆಸರು ಪಡೆದಿರುವ ಕನ್ನಡಿಗರ ಮರ್ಯಾದೆಯನ್ನು ಹರಾಜಾದದ್ದು ಸುಳ್ಳಲ್ಲ.
ಕೋಟ್ಯಾಂತರ ಜನ ವೀಕ್ಷಿಸುವ ಈ ಶೋನಲ್ಲಿ ಇಂತಹ ಅಸಹ್ಯ ವಾದ ಅಭಿರುಚಿಯನ್ನು ಪ್ರದರ್ಶಿಸಿದರೆ ಈ ಸಮಾಜದ ಯುವ ಜನತೆಯ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೇ ಇಂತಹದ್ದನ್ನೆಲ್ಲ ಪ್ರಸಾರ ಮಾಡುವ ಮತ್ತು ಇಂತಹ ಬರಹಗಾರರನ್ನು ಇಟ್ಟುಕೊಂಡಿರುವ ಇವರಿಗೆ ಸಾಮಾಜಿಕ ಹೊಣೆಗಾರಿಕೆ ಇದೆಯೇ!? ಇಷ್ಟೆಲ್ಲಾ ಹೇಳ್ತೀಯ ಆ ಸಂಭಾಷಣೆ ಯಾವುದು ಹೇಳು ಅನ್ನೋದಾದರೆ ಇಲ್ ಕೇಳಿ ಅಲ್ಲ ಓದಿ ಆ ಹಾಸ್ಯ ಮಾಡ್ತಿದೀನಿ ಅಂತನ್ನೋ ವಿಕೃತ ವ್ಯಕ್ತಿತ್ವದ ವ್ಯಕ್ತಿ ಎದುರುಗಡೆ ಇದ್ದಂತಹ ಹೆಣ್ಣು ಪಾತ್ರದಾರಿಗೆ ಹೇಳಿದ ಸಂಭಾಷಣೆ “ನೀನೇ ನನ್ನ ಉಸಿರು – ನೀನೇ ನನ್ನ ಉಸಿರು- ಆದರೆ ನೀನಾಗಬೇಕು ನನ್ನಿಂದ ಬಸಿರು”
ಮೊನ್ನೆ ಗೆಳೆಯರೊಬ್ಬರ ಪುಸ್ತಕ ಬಿಡುಗಡೆಗೆ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಹೊರಬಂದು ಬೈಕ್ ಸ್ಟಾರ್ಟ್ ಮಾಡುವಾಗ ನನ್ನ ಬೈಕ್ ಪಕ್ಕದಲ್ಲಿ ಮತ್ತೊಂದು ಬೈಕ್ ನಿಂತಿತ್ತು. ಅದರ ಮೇಲೆ ಒಬ್ಬ ಯುವಕ ಕುಳಿತಿದ್ದಾನೆ. ಕುರುಚಲು ಗಡ್ಡ ಬಿಳಿ ಶರ್ಟ್ ಆ ಶರ್ಟಿನ ಮೇಲಿನಿಂದ ಎರಡು ಗುಂಡಿ ಬಿಚ್ಚಿದ್ದಾನೆ. ಅವನು ಕುಳಿತಿರುವ ಭಂಗಿಗೆ ಕೆಮ್ಮಣ್ಣು ಬಯಲಿನಂತಹ ಎದೆ ಕಾಣುತ್ತಿದೆ. ಅವನ ಪಕ್ಕದಲ್ಲೇ ಮತ್ತೊಬ್ಬ ಗಡ್ಡದಾರಿ ಹುಡುಗ ನಿಂತಿದ್ದಾನೆ. ಇಬ್ಬರ ವಯಸ್ಸು ಬಹುಶಃ ಇಪ್ಪತ್ತರ ಆಸುಪಾಸು. ಬೈಕ್ ಮೇಲೆ ಕುಳಿತಿರುವ ಹುಡುಗ ಹೇಳುತ್ತಿದ್ದಾನೆ, ನಿಂತಿರುವ ಹುಡುಗ ಹೂಗುಟ್ಟುತ್ತಿದ್ದಾನೆ, “ನನಗೆ ಆ ಫೀಲಿಂಗ್ ಎಲ್ಲಾ ಮೊದಲು ಇರ್ಲಿಲ್ಲ. ಈಗೀಗ ಹಾಗೆಲ್ಲಾ ಅನಿಸ್ತಿದೆ. ಆದರೆ ಅವಳಿಗೆ ಮೊದಲಿಂದಾನೂ ನನ್ನ ಮೇಲೆ ಹಾಗೆ ಒಂಥರಾ ಫೀಲಿಂಗ್ಸ್! ಈಗ ಏನು ಮಾಡಲಿ ಮನೇಲಿ ಹೇಳೋದ ಬೇಡ್ವಾ ಗೊತ್ತಾಗ್ತಿಲ್ಲ” ಎಂದು ದುರಂತ ನಾಯಕನಂತೆ ಕುಳಿತಿದ್ದಾನೆ.
ಈ ಮೇಲಿನ ಎರಡೂ ಪ್ರಸಂಗಗಳಲ್ಲಿ ಎಡಬಿಡಂಗಿಗಳಂತೆ ಮಾತಾಡಿದವರು ಇಬ್ಬರೂ ಯುವಕರೇ. ಇಬ್ಬರೂ ಗಡ್ಡದಾರಿಗಳೇ ಇಬ್ಬರ ವಯಸ್ಸೂ ಸಹ ಇಪ್ಪತ್ತರ ಆಸುಪಾಸು ಅಂದರೆ ಇಂತಹ ಯುವಕರ ಬದುಕಿನ ಆಶೋತ್ತರಗಳೇನು ಗುರಿಗಳೇನು ಜೀವನದಲ್ಲಿ ಮುಖ್ಯವಾದದ್ದು ಯಾವುದು ಎಂಬ ಪರಿಕಲ್ಪನೆಯನ್ನು ಮೌಲ್ಯಗಳನ್ನು ತಿಳಿಸುವಲ್ಲಿ ಕಲಿಸುವಲ್ಲಿ ಯಾರು ಎಡವಿದವರು ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸುವಲ್ಲಿ ಯಾರು ಸೋತವರು.
ಎತ್ತ ನೋಡಿದರೂ ಅರಾಜಕತೆ ಅಸಹಕಾರ ಅಶಕ್ತರ ಆಕ್ರಂದನಗಳು ಮುಗಿಲು ಮುಟ್ಟುತ್ತಿವೆ. ಸುಳ್ಳೇ ಬಡಾಯಿ ಕೊಚ್ಚಿಕೊಂಡು ಯುವಜನರ ಭವಿಷ್ಯ ವನ್ನು ಕಗ್ಗತ್ತಲ ಕೂಪಕ್ಕೆ ತಳ್ಳುವ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪಾಲುದಾರರೇ ಎಂಬುದನ್ನು ನಂಬಲಸಾಧ್ಯವಾದರೂ ಸತ್ಯವೇ ಆಗಿದೆ. ಯಾವಾಗ ನಾಗರೀಕರಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವಾಗುತ್ತದೆಯೋ ಆಡಳಿತಾರೂಢ ಜನರಿಗೆ ಯಾವ ಅಳುಕು ಅಂಜಿಕೆ ಇಲ್ಲದೇ ತಮಗಿಷ್ಟ ಬಂದ ಹಾಗೆ ಹುಚ್ಚು ಕುದುರೆಗಳಂತೆ ಓಡಲಾರಂಭಿಸುತ್ತಾರೆ.
ಇಲ್ಲಿ ಹೇಳಿರುವ ಎರಡೂ ಪ್ರಸಂಗಗಳು ಕೂಡಾ ತೀರ ಕಳಪೆ ಅಥವಾ ಸಾಧಾರಣ ಅಂಶಗಳು ಎಂದೆನಿಸಬಹುದು ಆದರೆ ಅವುಗಳೆರಡರಲ್ಲೂ ಬಹಳ ಸಾಮ್ಯತೆ ಇರುವ ಅಂಶವೇನೆಂದರೆ ಈ ಸಮಾಜವು ಸಾಗುವ ದಾರಿಯ ಕರಾಳತೆಯನ್ನು ತೋರಿಸುತ್ತಿದೆ. ಸಮಾಜದಲ್ಲಿ ಯಾವುದೇ ಮುಜುಗರವಿಲ್ಲದೇ ಯಾವುದೇ ತೆರನಾದ ಸಂಕೋಚವಿಲ್ಲದೇ ಅವಾಚ್ಯ ಮತ್ತು ಮನಸ್ಸುಗಳನ್ನು ಅಲ್ಲೋಲಕಲ್ಲೋಲ ಮಾಡುವಂತಹ ಮನಸ್ಥಿತಿಯ ಪ್ರತಿಬಿಂಬದಂತಿರುವ ಭಾವನೆಗಳನ್ನು ಹೊರಹಾಕುವುದು ಈ ಸಮಾಜದಲ್ಲಿ ಈಗಾಗಲೇ ಮೌಲ್ಯಯುತ ಜೀವನವು ಅವನತಿಯತ್ತ ಸಾಗುತ್ತಿದೆ ಎಂಬುದರ ಸೂಚನೆಯಲ್ಲದೇ ಮತ್ತೇನು ಅಲ್ಲವೇ!?
ಇದಕ್ಕೆ ಪೂರಕವೆಂಬಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸುವ ಝಗಮಗಿಸುವ ಬಟ್ಟೆ ತೊಡುವ ಅನೀತಿ ಅನಾಚಾರಗಳ ಸಿದ್ಧಪುರುಷರು ಆಕಾಶದೆತ್ತರದ ಕಟೌಟ್ ಗಳಲ್ಲಿ ನಿಂತು, ನಗುತ್ತಾ ಯುವ ಜನರ ಕನಸುಗಳಿಗೆ ಕೊಳ್ಳಿ ಇಟ್ಟು ತಮ್ಮ ಕುರ್ಚಿಯನ್ನು ಸುಭದ್ರಗೊಳಿಸಿಕೊಳ್ಳುವ ದಂಧೆಯಲ್ಲಿ ತೊಡಗಿದ್ದಾರೆ. ಅವರಿಗೆ ಎಳೆಯ ಹುಡುಗರ ಪ್ರಾಣವಾಗಲಿ ಬದುಕಾಗಲೀ ಅವರ ಕನಸುಗಳಾಗಲೀ ಲೆಕ್ಕವೇ ಇಲ್ಲ ಅವೆ ಲೆಕ್ಕಾಚಾರವೆಲ್ಲಾ ಕುರ್ಚಿ ಮತ್ತು ಅಧಿಕಾರದ ಗದ್ದುಗೆಯ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಆ ಗದ್ದುಗೆಯನ್ನೇರಲು ಅದೆಷ್ಟೇ ಜೀವಗಳು ಬಲಿಯಾಗಲೀ ಅದೆಷ್ಟೇ ಬದುಕುಗಳು ಬರಡಾಗಲೀ ಯಾರೇನೇ ಆಗಲೀ ಸತ್ತವರ ಹೆಣಗಳನ್ನು ಹತ್ತಿ ಬರಡಾದ ಬದುಕಗಳನ್ನೇ ಮೆಟ್ಟಿಲು ಮಾಡಿಕೊಂಡು ತುಳಿದು ಮೇಲೇರಿ ಗದ್ದುಗೆಯ ಮೇಲೆ ಕೂರುವುದೇ ಅವರ ಧ್ಯೇಯವಾಗಿರುತ್ತದೆ.
ಅಮಾಯಕ ಮುಗ್ಧರ ಜೀವ ಹೀರಿ ಅವರ ಉಸಿರಿನಿಂದಲೇ ಇವರ ಹೊಟ್ಟೆ ತುಂಬಿಸಿಕೊಳ್ಳುವ ಲಜ್ಹೆಗೇಡಿ ಜನ ರಕ್ತ ಬೀಜಾಸುರರಂತೆ ಪೈಪೋಟಿಗೆ ಬಿದ್ದವರಂತೆ ಸಾರ್ವಜನಿಕರ ಮೇಲೆ ಮುಗಿಬಿದ್ದು ದೋಚುತ್ತಿದ್ದಾರೆ. ಒಂದು ಕಡೆ ರೋಗದ ಭಯ ಹುಟ್ಟಿಸಿ ಲೂಟಿ ಮತ್ತೊಂದೆಡೆ ದೇವರ ಹೆಸರನ್ನು ಹೇಳಿ ಲೂಟಿ ಕಡೆಗೆ ಇದೆಲ್ಲಾ ಸಾಲದು ಎಂಬಂತೆ ದೇವಮಾನವರೆಂಬ ಮುಖವಾಡ ತೊಟ್ಟವರನ್ನು ಸೃಷ್ಟಿಸಿ ಮುಗ್ಧ ಜನರ ರಕ್ತವನ್ನೂ ಕುಡಿಯುವ ರಕ್ತಪಿಪಾಸಿತನಕ್ಕೆ ಒಗ್ಗಿ ಹೋಗಿರುವ ಈ ವರ್ಗದ ಜನ ಸಾರ್ವಜನಿಕರ ಮತ್ತು ಸಮಾಜದ ಕಲ್ಯಾಣವನ್ನು ಬಯಸುವರೇ!? ರಕ್ತ ರುಚಿಯುಂಡ ಮೃಗವು ತನ್ನ ಹೃದಯದ ತುಂಬಾ ಮೃಗತ್ವದ ಕೋರೆಹಲ್ಲುಗಳನ್ನಲ್ಲದೇ ಮಾನವತ್ವದ ಹೂ ಅರಳಿಸಲು ಸಾಧ್ಯವೇ!?
ಸಾವಿನಲ್ಲೂ ರಾಜಕೀಯ ಹುಡುಕುವ ಮತ್ತು ತನ್ನ ಅನುಕೂಲಕ್ಕೆ ತಕ್ಕಂತೆ ಆ ಸನ್ನಿವೇಶಗಳನ್ನು ಪರಿವರ್ತಿಸಿ ಬಳಸಿಕೊಳ್ಳುವ ಹುನ್ನರಾದ ಕುಣಿಕೆ ಹೊಸೆಯವುದು ಕೇವಲ ಇಂತಹ ದುಷ್ಟಕೂಟದಿಂದ ಮಾತ್ರ ಸಾಧ್ಯವೇನೋ? ಈ ದೇಶದ ಮಾಂಸ ಮಜ್ಹೆಯನ್ನೆಲ್ಲಾ ಬಾಚಿ ಬಾಚಿ ತಿಂದದ್ದಾಯ್ತು ರಕ್ತವನ್ನು ಕುಡಿದದ್ದಾಯ್ತು. ಈಗಿನ್ನು ಹೊಸ ಕನಸುಗಳನ್ನು ಹೊತ್ತು ಅರಳುತ್ತಿರುವ ಎಷ್ಡೋ ಜೀವಗಳನ್ನು ಬಲಿ ತೆಗೆದುಕೊಂಡ ಈ ದೇಶಕ್ಕೆ ಈ ರಾಜ್ಯಕ್ಕೆ ಈ ಸಮಾಜಕ್ಕೆ ಅಭೂತಪೂರ್ವವಾದ ಆಸ್ತಿಯಾಗ ಬಹುದಿದ್ದ ಅವೆಷ್ಟೋ ಪ್ರಾಣಗಳ ಹರಣ ಮಾಡಿದ್ದು ಇದೇ ಕಟೌಟ್ ನಗೆಯ ಹಿಂದೆ ಇರುವ ದುಷ್ಟ ಮನಸ್ಥಿತಿಗಳು.
ಕೊಲ್ಲದಿರು ಹೀಗೆ ನಕ್ಕ ಹಾಗೆ ನಟಿಸಿ , ಪ್ರೇಮವೋ ಕಾಮವೋ ಅಥವಾ ದೇಶಪ್ರೇಮವೋ ಎಲ್ಲವೂ ನಿನ್ನೊಳಗೇ ಇರಲಿ- ನಟನೆಯೇ ಜೀವಾಳವಾಗಿರುವ ಇಂದಿನ ಜನಜೀವನದಲ್ಲಿ ಪ್ರತಿಭಟನೆಯೆಂಬುದು ಆಡಿಕೆಯ ವಸ್ತುವಾಗಿದೆ, ಬೆತ್ತಲೆ ರಾಜ್ಯದಲ್ಲಿ ಬಟ್ಟೆಯುಟ್ಟವನೇ ಹುಚ್ಚ ಎಂಬಂತಹ ಸ್ಥಿತಿಗೆ ತಲುಪಿರುವ ಈ ಸಮಾಜಕ್ಕೆ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅನಿಬೆಸೆಂಟ್ ರಂತಹ ಮುತ್ಸದ್ದಿಗಳು ಮತ್ತೆ ಅವತರಿಸಬೇಕಿದೆ. ನಮ್ಮ ಕಣ್ಣಿಗೆ ಕಾಣುವ ಸನ್ನಿವೇಶಗಳು ಪ್ರಸಂಗಗಳು ಅಥವಾ ಸಂದರ್ಭಗಳು ಬಹಳ ಕ್ಷುಲ್ಲಕವಾಗಿ ಕಾಣಬಹುದು ಉದಾಸೀನ ಮಾಡಬಹುದೆಂಬ ಧೋರಣೆಯನ್ನು ತಾಳಬಹುದು ಆದರೆ ದೇಹಕ್ಕೆ ತರಚುಗಾಯವಾಗಿ ಉದಾಸೀನದಿಂದಾಗಿ ವ್ರಣವಾಗಿ ಕಾಡುವ ಹಾಗೆ ಇಂತಹ ಮನಸ್ಥಿತಿಯನ್ನು ರೂಪಿಸುತ್ತಿರುವ ಸಮಾಜಕ್ಕೆ ಅದರ ಫಲವನ್ನು ಉಣ್ಣದೇ ಬೇರೆ ದಾರಿಯಿಲ್ಲ.
ಗುರುಗುಗ್ಗುರುಗಳ ಪದತಲದಲ್ಲಿ ತಾವು ಕಲಿತ ವಿದ್ಯೆ ಪದವಿ ಎಲ್ಲವನ್ನೂ ಸಮರ್ಪಿಸಿ ಗುಲಾಮರಾಗುವ ವಿದ್ಯಾವಂತ ಅಜ್ಞಾನಿಗಳಿದ್ದಲ್ಲಿ ಸಮಕಾಲೀನ ಸಮಾಜವು ಕೂಡಾ ಅದೇ ಹಾದಿ ಹಿಡಿಯದೆ ಬೇರೆ ಗತ್ಯಂತರವಿಲ್ಲ. ಸಮಾಜದ ಚುಕ್ಕಾಣಿ ಹಿಡಿಯುವ ಜನರೇ ಹಾದಿ ತಪ್ಪಿನಡೆದು ಕಿರಿಯ ತಲೆಮಾರಿನ ಯುವ ಪೀಳಿಗೆಗೆ ತಪ್ಪುಸಂದೇಶ ಕೊಟ್ಟರೆ ಅವರು ಕಲಿತ ವಿದ್ಯೆ ಮತ್ತು ಗಳಿಸಿದ ಪದವಿಯ ಸಾರ್ಥಕತೆ ಏನು. ಜಗತ್ತು ಜಾಗತೀಕರ ಮುಳ್ಳುಗಳಕು ಗ್ರಾಮವಾಯಿತೇ ಅಥವಾ ಮನುಷ್ಯನೆಂಬುವವನು ಜಗತ್ತಿನೆದುರಲ್ಲಿ ಎದೆಗುಂದಿ ಗೊಂದಲಕ್ಕೀಡಾಗಿ ತನ್ನ ಮಾತು ಕಳೆದುಕೊಂಡನೇ ಯಾವುದು ಉತ್ತರ ಯಾವುದು ಪ್ರಶ್ನೆ.
ಜಾಗತೀಕರಣದಾಚೆಗೂ ನಾವು ನಮ್ಮತನವನ್ನು ಕಾಪಾಡಿಕೊಳ್ಳಬೇಕಿದೆ. ಪಕ್ಕದ ಮನೆಯವರು ನಮ್ಮ ಮನೆಗೆ ಬಂದರೆಂದು ಮನೆಯನ್ನು ಅವರಿಗೆ ಬಿಟ್ಟುಕೊಟ್ಟು ಹೊಸ್ತಿಲಿನಾಚೆ ನಿಲ್ಲಲಾಗದು. ಇಂತಹ ಸಮಯದಲ್ಲೇ ನಾವು ಧೃತಿಗೆಡದೆ ನಿಲ್ಲಬೇಕಿದೆ. ಈಗಿರುವ ಮುಂದಾಳುಗಳು ಸೂಕ್ತ ರೀತಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸದಿದ್ದರೆ ಅವರ ಹಿಂಬಾಲಕರಿಗೆ ಕರಾಳ ಬದುಕು ಕಟ್ಟಿಟ್ಟ ಬುತ್ತಿ. ಒಬ್ಬ ವಿದ್ಯಾರ್ಥಿಯ ಬದುಕು ಮತ್ತು ಭವಿಷ್ಯ ರೂಪಿಸುವುದೆಂದರೆ ಕೇವಲ ಆತನ ಅನ್ನಾಹಾರಗಳಿಗಷ್ಟೇ ಸೀಮಿತವಾಗುವುದಿಲ್ಲ ಇಡೀ ಸಮಾಜ ಮತ್ತು ನಾಡಿನ ದೇಶದ ಭವಿಷ್ಯ ಕ್ಕೆ ಸಂಬಂಧಿತವಾಗುತ್ತದೆ.
ಆದ್ದರಿಂದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವಂತಹವರು ನೆಲದ ಭಾವನೆಗಳನ್ನು ಮತ್ತು ಗಾಳಿಯ ಆಂತರ್ಯವನ್ನೂ ಅರಿತು ಅಡಿಯಿಟ್ಟಲ್ಲಿ ಮುಂದಿನ ದಿನಗಳಲ್ಲಿ ಸದೃಢವಾದ ಸಮಾಜ ಸುಭದ್ರವಾದ ನಾಡು ಅಬೇಧ್ಯವಾದ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಜಾಗತೀಕರಣದ ತೊಟ್ಟಿಲಲ್ಲಿ ಸುಖವಿರಬಹುದು ಆದರೆ ಸುಖದ ಹಿಂದೆ ಇರಿಯುವ ಮುಳ್ಳುಗಳೂ ಇರಬಹುದು ಸುಪ್ಪತ್ತಿಗೆಯ ಮೇಲೆ ಮಲಗುವ ಮುನ್ನ ಎಚ್ಚರಿರಬೇಕಿತ್ತು ಈಗಲೂ ಕಾಲ ಮಿಂಚಿಲ್ಲ …
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
೯೮೪೪೬೭೩೯೭೬