ಹೌದು, “ಮೌಢ್ಯ ಮುಕ್ತ ಹಟ್ಟಿ ಅಭಿಯಾನ”ದಲ್ಲಿ ಈ ಸಂಘರ್ಷ ಶಮನಗೊಳಿಸಬಹುದು ಎನ್ನುವ ಆಸೆ ಹುಟ್ಟಿಬಿಟ್ಟಿದೆ. ಅದು ಹೇಗೆಂದರೆ… ಇತ್ತೀಚಿಗೆ ಹಿರಿಯೂರು ತಾಲ್ಲೂಕಿನ ಶಿಕ್ಷಕ ಸಂಘದ ಅಧ್ಯಕ್ಷನಾಗಿರುವ ಗೊಲ್ಲ ಸಮುದಾಯದ ಶಿವಾನಂದ ಎನ್ನುವ ವ್ಯಕ್ತಿ ತನ್ನ ಮನೆಯ ನಿರ್ಮಾಣ ಕಾರ್ಯಕ್ಕೆ ಮಾದಿಗ ಸಮುದಾಯದ ಜನರು ಬೇಡ ಎಂದು ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿರುವುದು ನಮಗೆಲ್ಲ ಗೊತ್ತಿದೆ.
ಈ ಹಿಂದೆ ಪಾವಗಡ ತಾಲ್ಲೂಕಿನ ಪೆಮ್ಮನಗೊಲ್ಲರ ಹಟ್ಟಿಗೆ ಅಂದಿನ ಸಂಸದರು, ಇಂದಿನ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಸಚಿವರಾಗಿರುವ ನಾರಾಯಣಸ್ವಾಮಿ ಅವರನ್ನೇ ಜಾತಿಯ ಕಾರಣಕ್ಕೆ ಹಟ್ಟಿಗೆ ಬಿಟ್ಟುಕೊಳ್ಳಲಿಲ್ಲ ಎನ್ನುವ ಘಟನೆ ರಾಷ್ಟಮಟ್ಟದಲ್ಲಿ ದೊಡ್ದ ಸುದ್ದಿಯಾಗಿತ್ತು. ಈ ಘಟನೆ ಎಲ್ಲೆಡೆ ಹಬ್ಬುತ್ತಿದ್ದಂತೆ ಕಾಡುಗೊಲ್ಲ ಸಮುದಾಯದ ಮೇಲೆ ಮುಗಿಬೀಳುವಂತಹ ಆಕ್ರೋಶವನ್ನ ಹಲವು ಸಂಘಟನೆಗಳು ವ್ಯಕ್ತಪಡಿಸಿದವು. ಮನುವಾದಿ ಮಾಧ್ಯಮಗಳಂತು ಕಾಡುಗೊಲ್ಲ ಹಾಗೂ ಮಾದಿಗ ಸಮುದಾಯದ ನಡುವೆ ಸಂಘರ್ಷದ ಬೆಂಕಿ ಇಡುವ ವಿಕೃತ ಪ್ರಯತ್ನ ಮಾಡಿದವು.
ನಾನಂತೂ ಮನುಷ್ಯರ ಘನತೆಗೆ ಚ್ಯುತಿ ತರುವ, ಮನುಷ್ಯರನ್ನ ಮನುಷ್ಯ ನೊಡದೇ ಇರುವ ಯಾರನ್ನೇ ಆಗಲಿ ಖಂಡಿಸುತ್ತೇನೆ. ಜೊತೆಗೆ ಸೂಕ್ತ ಕಾನೂನು ಕ್ರಮಕ್ಕೂ ಆಗ್ರಹಿಸುತ್ತೇನೆ. ನಾನೀಗ ಏನನ್ನು ಹೇಳಲು ಬಯಸುತ್ತಿದ್ದೇನೆ ಅಂದರೆ, ಕಾಡುಗೊಲ್ಲ ಹಾಗೂ ಮಾದಿಗ ಸಮುದಾಯದ ನಡುವೆ ಒಂದು ಒಳ್ಳೆಯ ಸೌಹಾರ್ದ ಬಾಂಧವ್ಯ ಮೂಡಿಸುವ ಕೆಲಸವನ್ನ ಪ್ರಜ್ಞಾವಂತರಾದ ನಾವುಗಳು ಮಾಡಬೇಕಾಗಿದೆ.
ಆ ನೆಲೆಯಲ್ಲಿ “ಮೌಢ್ಯ ಮುಕ್ತ ಹಟ್ಟಿಅಭಿಯಾನ’ ಶುರುಮಾಡಿದ್ದೇವೆ. ಅಭಿಯಾನದ ಮೊದಲನೇ ಪ್ರಯತ್ನವಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೋಕಿನ ರಾಮಪ್ಪನ ಹಟ್ಟಿಯಲ್ಲಿ ಹೆಣ್ಣು ಮಕ್ಕಳು ಸೂತಕದ ಆಚರಣೆಯ ಸಲುವಾಗಿ ಹಟ್ಟಿಯಿಂದ ಹೊರಗುಳಿದು ನಲುಗುತ್ತಿದ್ದ ಜೀವ ವಿರೋಧಿ ಪದ್ಧತಿಗೆ ನಮ್ಮ ಮೌಢ್ಯ ಮುಕ್ತ ಅಭಿಯಾನ ಅಂತ್ಯ ಹಾಡಿದೆ.
ಇಂಥಾ ಕ್ರಾಂತಿಕಾರಕ ಬದಲಾವಣೆಯ ಸುದ್ದಿ ನಮ್ಮ ಮುಖ್ಯವಾಹಿನಿಯ ಮೀಡಿಯಾಗಳಿಗೆ ಮುಖ್ಯವೆನಿಸುವುದಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾದರೇನು ಬಿಟ್ಟರೇನು ನಾವಂತು ಕಾಡುಗೊಲ್ಲರ ಹಟ್ಟಿಗಳನ್ನ ‘ಮೌಢ್ಯ ಮುಕ್ತ ಹಟ್ಟಿ’ಗಳನ್ನಾಗಿ ರೂಪಿಸುವ ಪಣತೊಟ್ಟಿದೇವೆ. ಮಾನವೀಯ ಮನುಷ್ಯರು ಮಾಡಬೇಕಿರುವ ಕೆಲಸ ಇದಲ್ಲವೆ? ಹಾಗೆ ನೋಡಿದರೆ ಕೆಲ ಮೌಢ್ಯಗಳನ್ನ ಹೊರತುಪಡಿಸಿದರೆ ಕಾಡುಗೊಲ್ಲರು ವೈಚಾರಿಕ, ಜಾತ್ಯಾತೀತ ಪ್ರಕೃತಿಪರ ಚಿಂತನೆ ಉಳ್ಳವರಾಗಿದ್ದಾರೆ.
ಕಾಡುಗೊಲ್ಲ ಹೆಂಗಸರು ವೈದಿಕ ವೈದವ್ಯಕ್ಕೆ ತಿಲಾಂಜಲಿ ಇಟ್ಟು ಎಷ್ಟೋ ವರ್ಷಗಳಾಗಿವೆ. ಹೌದು ಕಾಡುಗೊಲ್ಲರ ಹೆಂಗಸರು ಗಂಡ ಸತ್ತರೆ ತಾಳಿ ಬಳೆ ತೆಗೆಯದೇ, ಕೃಷ್ಣನೆ ನಮ್ಮ ಗಂಡ ಎಂದು ಭಾವಿಸುತ್ತಾರೆ. ಕಾಡುಗೊಲ್ಲರಲ್ಲೆ ತಾಳಿ ಕಟ್ಟದ ಕರಡಿಗೊಲ್ಲರು ಎನ್ನುವ ಒಂದು ಬೆಡಗಿದೆ. ಈ ಬೆಡಗಿನ ತಾಳಿ ಕಟ್ಟದ ಗೊಲ್ಲರು ಮದುವೆಯಾಗುವಾಗ ತಾಳಿಯನ್ನ ಕಟ್ಟದೇ ಸಂಗಾತಿಯನ್ನ ವರಿಸುತ್ತಾರೆ. ಇನ್ನೂ ಕಾಡುಗೊಲ್ಲರು ಪೂಜಿಸುವ ಎಲ್ಲಾ ದೈವಗಳು ಮನುಷ್ಯರೇ ಆಗಿದ್ದಾರೆ. ತಮ್ಮ ಅಭ್ಯುದಯಕ್ಕಾಗಿ ಬದುಕಿದ, ತಮ್ಮ ಬವಣೆ ನೀಗಿದ ಸಾಂಸ್ಕೃತಿಕ ನಾಯಕ, ಈರಗಾರರನ್ನೇ ಇವತ್ತಿಗೂ ದೈವವೆಂದು ಪೂಜಿಸುತ್ತಿದ್ದಾರೆ.
ಉದಾಹರಣೆಯಾಗಿ ನೋಡುವುದಾದರೆ:
ಕಾಡುಗೊಲ್ಲರ ಜುಂಜಪ್ಪ ಒಬ್ಬ ಸಾಮಾನ್ಯ ದನಗಾಯಿಯಾಗಿದ್ದವನು, ಪಶುಪಾಲನೆ ಮಾಡುತ್ತಲೇ ಬಂಜರು ಭೂಮಿಗಳಲ್ಲಿ ಹಸಿರು ಚಿಗುರುವಂತೆ ಮಾಡಿ ಪ್ರಕೃತಿಯ ಸಮತೋಲನ ಕಾಯ್ದುಕೊಂಡವನು. ಗೊಲ್ಲರ ಜುಂಜಪ್ಪ ಬಲುಗಾರ ಎಂಬ ಸುದ್ದಿ ದಿಲ್ಲಿ ಬಾಗಿಲಿಗೆ ಬಡಿದಾವೋ ಎಂದು ಕಾಡುಗೊಲ್ಲರು ರಾಜನ ರೂಪದಲ್ಲಿ ಪರಿಭಾವಿಸಿಕೊಂಡು ಜುಂಜಪ್ಪನನ್ನ ಕೊಂಡಾಡುತ್ತಾರೆ. ಪಶುಪಾಲಕ ನಾಗಿದ್ದ ಜುಂಜಪ್ಪ ಅಂದಿನ ಹುಲ್ಲುಗಾವಲು ಅಧಿಪತ್ಯಕ್ಕೆ ಸಡ್ಡು ಹೊಡೆದು ಒಂದಷ್ಟು ದಿನಗಳ ಮಟ್ಟಿಗೆ ಅಧಿಕಾರ ಗಿಟ್ಟಿಸಿಕೊಂಡವನು. ಈ ಅಧಿಕಾರ ಇರುವುದು ಮೆರೆಯುವುದಕ್ಕೆ ಅಲ್ಲ ಎಂದು ಸೇಳೂರು ದೊರೆಗಳಿಗೆ ಎಚ್ಚರಿಸಿ “ಎಲೈ ಬಿಚ್ಚಿರಲೆ ನಿಮ್ಮ ಪೇಟ ರುಮಾಲುಗಳನು, ಹಿಡಿರಲೇ ಚಲಿಕೆ ಗುದ್ದಲಿಗಳನು, ನಡಿರಲೇ ಸೇಳೂರು ಕೆರೆ ಕಟ್ಟನಾ” ಎನ್ನುತ ಅಧಿಕಾರ ಜನರ ಒಳಿತಿಗೆ ಬಳಕೆಯಾಗ ಬೇಕು ಎನ್ನುವುದನ್ನ ತೋರಿಸಿಕೊಟ್ಟನು. ಕೊನೆಗೆ ಸಿಕ್ಕ ಅಧಿಕಾರವನ್ನ ಸೇಳೂರು ನಾಯಕರಿಗೆ ಕೊಟ್ಟು ಕೊನೆಗೆ ತನ್ನ ರಾಸುಗಳನ್ನ ಹೊಡೆದುಕೊಂಡು ಕಾಡಿನತ್ತ ತೆರಳಿದವನು ಜುಂಜಪ್ಪ. ಇವತ್ತಿನ ಅಧಿಕಾರಕ್ಕೆ ಅಂಟಿ ಕುಳಿತಿರುವ ರಾಜಕಾರಣಕ್ಕೆ ಜುಂಜಪ್ಪ ಮಾದರಿಯಾಗುತ್ತಾನೆ.
ಜುಂಜಪ್ಪ ಸರ್ವಜನರನ್ನ ಒಳಗೊಂಡಿದ್ದ ಮಾನವೀಯ ಪಶುಪಾಲಕನಾಗಿದ್ದ ಎನ್ನುವುದಕ್ಕೆ ಕಾಡುಗೊಲ್ಲರನ್ನ ಹೊರತುಪಡಿಸಿ ಬೇರೆ ಬೇರೆ ಜಾತಿಯ ಜನರ ಒಕ್ಕಲನ್ನ ಹೊಂದಿರುವುದನ್ನ ಕಾಣಬಹುದಾಗಿದೆ. ಕನ್ನಡದ ಜಾನಪದ ಲೋಕಕ್ಕೆ ಜುಂಜಪ್ಪನ ಮಹಾಕಾವ್ಯ ಈ ಸಮುದಾಯದ ಕಾಣ್ಕೆಯಾಗಿದೆ. ಕರಡಿಬುಳ್ಳಪ್ಪ ಕಾಡುಗೊಲ್ಲರ ಬಸವಣ್ಣ ಎಂದೇ ಖ್ಯಾತಿ ಪಡೆದಿದ್ದಾನೆ. ಮ್ಯಾಸ ನಾಯಕ ಸಮುದಾಯದ ಕರಿಯೊಬವ್ವಳನ್ನ ಮದುವೆಯಾಗಿ ಜಾತ್ಯಾತೀತೆಯನ್ನು ಮೆರೆದಿದ್ದಲ್ಲದೇ ಆಕೆಯ ಹೆಸರಿನಲ್ಲಿ ಕರಿಯೋಬನಹಳ್ಳಿ ಕಟ್ಟೆಮನೆ ಕಟ್ಟಿಸಿಕೊಟ್ಟಿದ್ದಾನೆ. ಕರಡಿಬುಳ್ಳಪ್ಪನ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಇನ್ನೂ ಬಹುತೇಕ ಕಾಡುಗೊಲ್ಲರ ಈರಗಾರರು ಅಂತರ್ಜಾತಿ ವಿವಾಹವಾಗಿರುವುದನ್ನ ಕಾಡುಗೊಲ್ಲರ ಕಾವ್ಯಗಳಲ್ಲಿ ಕಾಣಬಹುದು. ಇಷ್ಟೆಲ್ಲಾ ವೈಚಾರಿಕ ಹಿನ್ನೆಲೆ ಇದ್ದರೂ ಈ ಬುಡಕಟ್ಟು ಕಾಡುಗೊಲ್ಲರು ಇವತ್ತಿಗೂ ಕಟ್ಟುಪಾಡುಗಳನ್ನ ಬಿಡುವ, ಬಿಡದಿರುವ ಹೊಯ್ದಾಟದಲ್ಲಿದ್ದಾರೆ. ಇದಕ್ಕೆ ಇವರ ಬದಲಾಗದ ಆದಿಮ ಮನಸ್ಥಿತಿ, ಬುಡಕಟ್ಟಿನ ಬದುಕು ಕಾರಣವಾಗಿರಬಹುದು. ಹಾಗೆ ನೋಡಿದ್ದಾರೆ ಇಡೀ ಮಧ್ಯ ಕರ್ನಾಟಕದ ಸಮುದಾಯಗಳಿಗೆ ಸಾಂಸ್ಕೃತಿಕ ಕಾಣ್ಕೆಯನ್ನ ಕಾಡುಗೊಲ್ಲರು ನೀಡಿದವರಾಗಿದ್ದಾರೆ. ಅಷ್ಟೊಂದು ಅಗಾಧವಾದ ಸಾಂಸ್ಕೃತಿಕ ಶ್ರೀಮಂತಿಗೆ ಈ ಸಮುದಾಯದಲ್ಲಿದೆ.
ಮೂರು ಕಟ್ಟೆ ಮುನ್ನೂರು ಕುಲಗಳಿಗೂ ಮಿಗಿಲಾದಷ್ಟು ಸಾಂಸ್ಕೃತಿಕ ವಿಸ್ತಾರ ಪಡೆಯುತ್ತಲೇ ಇರುವ ಕಾಡುಗೊಲ್ಲರು ತಮ್ಮ ದೈವಾಚರಣೆಯ ಬುಡಕಟ್ಟು ಸಂಭ್ರಮಗಳಲ್ಲಿ 12 ಕೈವಾಡದವರು ಇರಲೇ ಬೇಕು. ಇದೆಲ್ಲವೂ ಬೇರೆ ಬೇರೆ ಸಮುದಾಯಗಳೊಡನೆ ಪರಸ್ಪರ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೂ ಹೌದು. ಕಾಡುಗೊಲ್ಲರ ದೈವಗಳು ಗುಬ್ಬಗಳಿಂದ ಹೊರಬಂದರೆ ಹಟ್ಟಿ ಬೆಳ್ಳಗೆ ಮಾಡಲು ಓಲಿಗ್ಗಾ ಎನ್ನುತಾ ಮನೆ ಮನೆಗೆ ಜನಿಗೆ ಚಿಮ್ಮಿಸಲು ಅಗಸರು ಬೇಕು, ದೇವರನು ಕೊಂಡಾಡುತ ಉರುಮೆ ಬಡಿಯಲು ಹೊಲೆಯರು ಬೇಕು, ಪಂಜು ಹಿಡಿದು ಬೆಳಗಲು ಮಾದಿಗರು ಇರುತ್ತಿದ್ದರು. ಹೀಗೆ ಪಂಜನ್ನು ಹಟ್ಟಿಯ ಗುಡಿ ಗೌಡ ಹಿಡಿದು ಬೆಳಗುತ್ತಾರೆ.
ಕಮ್ಮಾರ, ಚಮ್ಮಾರ, ಬಡಗಿ, ಪಂಚಾಂಗಿ, ಶಾನುಭೋಗ, ನಾಯಿಂದ, ಚಲುವಾದಿ, ದಾಸಪ್ಪ, ಯಳವ, ಕ್ಷೌರಿಕ, ಅಕ್ಕಸಾಲೆ, ತೋಟಿ, ತಳವಾರ, ನೀರುಗಂಟಿ, ಕುಂಬಾರ, ಹೀಗೆ ಒಟ್ಟು ಹನ್ನೆಡು ಜಾತಿಗಳ ಜನರು ಕಾಡುಗೊಲ್ಲರ ಸಾಂಸ್ಕೃತಿಕ ಸಂಭ್ರಮಗಳಲ್ಲಿ ಜೊತೆಯಾಗುತ್ತಿದ್ದರು. ಆದರೆ ಇವತ್ತಿನ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಕಾಡುಗೊಲ್ಲರ ಹಟ್ಟಿಗಳಿಗೆ ದಲಿತ ಸಮುದಾಯದವರನ್ನ ಹಟ್ಟಿಬಿಟ್ಟುಕೊಳದೇ ಅವರಿಗೆ ನಿಷೇಧ ಹೇರುವುದು ಕಾನೂನು ಬಾಹಿರ.
ಕಾಡುಗೊಲ್ಲರ ಈ ಮೌಢ್ಯಗಳಿಗೆ ಕಾರಣಗಳೇನು?
ಕಾಡುಗೊಲ್ಲ ಸಮುದಾಯದವನಾದ ನಾನು ಯಾಕೇ ಕಾಡುಗೊಲ್ಲರು ಈ ರೀತಿ ಮಾಡುತ್ತಿದ್ದಾರೆ? ಇದಕ್ಕೆ ಕಾರಣವೇನು? ಅನ್ನುವುದನ್ನ ಹುಡುಕ ಹೊರಟಾಗ ಸಿಕ್ಕ ಉತ್ತರ: ಮೊದಲು ಕಾಡುಗೊಲ್ಲರು ದಲಿತರನ್ನ ಹಟ್ಟಿಯೊಳಗೆ ಬಿಟ್ಟುಕೊಳ್ಳುತ್ತಿದ್ದರು. ಆ ಕಾಲಘಟ್ಟದಲ್ಲಿ ಕಾಡುಗೊಲ್ಲರ ಹಟ್ಟಿಗಳಲ್ಲಿ ಗುಡಿಸಿಲಿನ ಮನೆಗಳು ಇದ್ದವು. ಕೆಲವೊಮ್ಮೆ ಹಟ್ಟಿಯ ಗುಡಿಸಲುಗಳಿಗೆ ಬೆಂಕಿ ಬಿದ್ದು ಹಟ್ಟಿ ಸುಟ್ಟು ಬೂದಿಯಾಗುತ್ತಿತ್ತು. ಹೀಗಾಗಿ ಕಾಡುಗೊಲ್ಲರಲ್ಲಿ ಭಯ ಹುಟ್ಟಿಸಿತು. ಈ ಆತಂಕದಿಂದ ಕಾಡುಗೊಲ್ಲರ ಹಟ್ಟಿಗಳ ದೈವಾಚರಣೆಯ ಸಂದರ್ಭದಲ್ಲಿ ದೈವಗಳು ಹೊಳೆಯ ಪೂಜೆಗೆ ಹೋಗಿ ಮರಳಿ ಹಟ್ಟಿ ಒಳಗೆ ಹೋಗುವವರೆಗೂ ಪಂಜನ್ನ ಹಿಡಿದು ಬರುತ್ತಿದ್ದರು, ಆ ನಂತರ ಹಟ್ಟಿಯೊಳಗೆ ಪಂಜಿಡಿದು ಬಂದರೆ ಎಲ್ಲಿ ಪಂಜಿನ ಕಿಡಿ ತಾಕಿ ಗುಡಿಸಲು ಸುಟ್ಟಾವು ಎನ್ನುವ ಭಯದಿಂದ ಪಂಜು ಹಿಡಿದವರು ಹಟ್ಟಿಯ ಉದಿಯಲ್ಲಿಯೆ ನಿಂತರು. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲ್ಲಿ ತಪ್ಪಾದ ಪರಿಣಾಮವನ್ನ ಕಾಡುಗೊಲ್ಲರ ಹಟ್ಟಿಗಳಲ್ಲಿ ಕಾಣುತ್ತೇವೆ.
ಹೀಗಾಗಿ ದಲಿತ ಸಮುದಾಯದ ಬಲಗೈ ಎಂದು ಗುರುತಿಸಿಕೊಳ್ಳುವ ಹೊಲೆಯರು ಉರುಮೆ ಬಡಿಯುತ್ತಾ ಹಟ್ಟಿಯೊಳಕ್ಕೆ ಬಂದರು ಎಡಗೈ ಮಾದಿಗರು ಪಂಜು ಹಿಡಿದು ಹಟ್ಟಿಯಿಂದ ಹೊರಗುಳಿದರು. ಕಾಡುಗೊಲ್ಲರು ಬದಲಾಗಬೇಕು ಎಂದು ಸಮಾಜದ ಎಲ್ಲಾ ವರ್ಗದ ಜನರು ಬಯಸುವುದು ಸಹಜ. ಆದರೆ ಕಾಡುಗೊಲ್ಲರ ಒಳತೋಟಿಗಳನ್ನ ಅರ್ಥಮಾಡಿಕೊಳ್ಳುವವರು ಯಾರು ಇಲ್ಲ. ಇವರನ್ನ ಯಾವ ಸಮುದಾಯಗಳು ಶೋಷಣೆ ಮಾಡದಿದ್ದರು ತಮ್ಮನ್ನ ತಾವೇ ಶೋಷಿಸಿಕೊಳ್ಳುವ ಸ್ವಶೋಷಕರಾಗಿದ್ದಾರೆ. ಹೀಗಾಗಿ ಇವರನ್ನ ಸ್ವ ಅಸ್ಪೃಶ್ಯರು ಎಂದು ಕರೆಯಬಹುದು. ಇದಕ್ಕೆ ಕಾಡುಗೊಲ್ಲರು ಇವತ್ತಿನವರೆಗೂ ಬುಡಕಟ್ಟಿನ ನಂಟನ್ನ ಗಟ್ಟಿಯಾಗಿ ಹಿಡಿದುಕೊಂಡಿರುವುದು.
ಇನ್ನೂ ಕಾಡುಗೊಲ್ಲರಿಗೆ ಸಿಗಬೇಕಾದ ಸಮಾಜಿಕ ನ್ಯಾಯವನ್ನ ಯಾವ ಸರ್ಕಾರಗಳು ಕೊಟ್ಟಿಲ್ಲ. ಮುಖ್ಯವಾಹಿನಿಯಿಂದ ದೂರವೇ ಉಳಿದಿರುವ ಕಾಡುಗೊಲ್ಲರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಆರ್ಥಿಕವಾಗಿ ಅತೀ ಹಿಂದುಳಿದ್ದಾರೆ. ಇದು ಸಾಲದೆಂಬಂತೆ ಒಂದಷ್ಟು ಮೌಢ್ಯಗಳು ಇವರನ್ನ ಮತ್ತಷ್ಟು ಹಿನ್ನೆಲೆಗೆ ಸರಿಯುವಂತೆ ಮಾಡಿವೆ. ಪ್ರಕೃತಿ ಮಕ್ಕಳಾದ ಇವರುಗಳಲ್ಲಿ ಕೆಲ ಮೌಢ್ಯ ವಕ್ಕರಿಸಿಕೊಳ್ಳಲು ವೈದಿಕಶಾಹಿಯ ಪ್ರಭಾವದ ಹೇರಿಕೆಯಾಗಿದೆ.
ಕನ್ನಡದ ಅಪ್ಪಟ ಬುಡಕಟ್ಟಾಗಿದ್ದರೂ ಇವರನ್ನ ಇಲ್ಲಿಯವರೆಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿಲ್ಲ. ನಮ್ಮನ್ನ ಎಸ್ಟಿಗೆ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಇವರ ಸಂಕಟ ಅರ್ಥವಾಗುತ್ತಿಲ್ಲ. ಇನ್ನೂ ಕಾಡುಗೊಲ್ಲತಿಯರ ಪಾಡಂತೂ ಹೇಳತೀರದು. ಮುಟ್ಟಾದಾಗ, ಹೆರಿಗೆಯಾದಾಗ ಹಟ್ಟಿ ತೊರೆದು ಮಾನವ ಘನತೆಯನ್ನ ಕೆಳೆದುಕೊಂಡು ಯೋಗ್ಯವಲ್ಲದ ಸ್ಥಳಗಳಲ್ಲಿ ಹೆಣ್ಣು ಜೀವಗಳು ನರಕ ಯಾತನೆ ಅನುಭವಿಸುತ್ತಿವೆ. ಈ ಸೂತಕಗಳ ಸಹವಾಸ ಸಾಕೆಂದು ಎಷ್ಟೋ ಹೆಂಗಸರು ಗರ್ಭಕೋಶ ತೆಗೆಸಿಕೊಂಡು ಮತ್ತಷ್ಟು ಮಾನಸಿಕ ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.
ಹುಟ್ಟುವ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿವೆ. ಹಟ್ಟಿಗಳಲ್ಲಿ ಇನ್ನೂ ಗುಡಿಸಲು ಮನೆಗಳೆ ಕಾಣುತ್ತಿಲ್ಲ, ಗೋವುಗಳನ್ನ ಕಾಯುತ್ತಿದ್ದ ಕಾಡುಗೊಲ್ಲರು ಇದೀಗ ಜೀವನ ನಿರ್ವಹಣೆಗಾಗಿ ಅಲೆಮಾರಿಗಳಾಗಿ ತಮ್ಮ ಕುಟುಂಬ ಸಮೇತ ಊರೂರು ಸುತ್ತುತ್ತಿದ್ದಾರೆ. ಒಂದು ಕಾಲದಲ್ಲಿ ಹುಲ್ಲುಗಾವಲು ಪೊರೆದವರಿಗೆ ಅಪ್ಪಿ ತಪ್ಪಿ ಬೆಳೆದ ಯಾವುದಾದರೂ ಹೊಲಕ್ಕೆ ಒಂದೆರಡು ಕುರಿಗಳು ನುಗ್ಗಿದರೆ ಕುರಿಗಾಯಿಗಳ ಕತೆ ಮುಗಿದಂತೆಯೆ, ಮಾನವೀಯತೆ ಮರೆತ ದರ್ಪದ ಜನರು ಮನಸೋ ಇಚ್ಚೆ ಥಳಿಸುತ್ತಾರೆ.
ಮಂಡ್ಯದ ಸಮೀಪ ನೀರು ಕುಡಿಯಲು ತೋಟಕ್ಕೆ ಹೋದ ಕುರಿಗಾಯಿ ಬಾಲಕನನ್ನ ಮರಕ್ಕೆ ಕಟ್ಟಿ ಥಳಿಸಿದ್ದು ನಿಮಗೆ ಗೊತ್ತಿರಬೇಕು. ಇತ್ತೀಚೆಗೆ ಕಡೂರು ತಾಲೋಕಿನ ಒಂದು ಊರಿಗೆ ವಲಸೆ ಹೋಗಿದ್ದ ಹೊಸದುರ್ಗದ ಕುರಿಗಾಯಿ ಕುಟುಂಬದ ಮೇಲೆ ಜಮೀನ ಮಾಲೀಕರು ಮರಣಾಂತಿಕ ಹಲ್ಲೆ ಮಾಡಿದರು. ಕೊನೆಗೆ ಪೊಲೀಸ್ ಠಾಣೆಗೂ ಹೋಗಿ ದೂರು ಕೊಡಲು ಧೈರ್ಯ ಸಾಲದೆ ಹಿಂದೇಟು ಹಾಕಿದರು. ರಸ್ತೆ ಅಪಘಾತ, ಪ್ರಕೃತಿ ವಿಕೋಪ, ಕಳ್ಳಕಾಕರ ಕಾಟ ಹೀಗೆ ನೂರಾರು ಸವಾಲುಗಳನ್ನ ಕಾಡುಗೊಲ್ಲರು ಪ್ರತಿನಿತ್ಯವೂ ಎದುರಿಸುತ್ತಿದ್ದಾರೆ.
ಈಗ ಹೇಳಿ ಒಂದೇ ದಿನಕ್ಕೆ “ಕಾಡುಗೊಲ್ಲರೆ ಬದಲಾಗಿ” ಎಂದು ಹೇಳಿದರೆ ಅದು ಸಾಧ್ಯವಾಗುವ ಮಾತೆ? ಬುಟಕಟ್ಟು ಜನರ ಬದುಕೇ ಒಂದು ರೀತಿಯಲ್ಲಿ ವಿಜಿತ್ರ, ಸೋಜಿಗ. ನಾಗರಿಕ ಸಮಾಜದೊಂದಿಗೆ ಸದಾ ಅಂತರ ಕಾಯ್ದುಕೊಂಡು ಹಟ್ಟಿ ಹಾಡಿಗಳಲ್ಲಿ ಪ್ರತ್ಯೇಕವಾಗಿ ಕತ್ತಲ ಬದುಕಲ್ಲಿ ತಡಕಾಡುತ್ತಿರುವ ಹಟ್ಟಿ ಜನರಿಗೆ ಅರಿವಿನ ಬೆಳಕನ್ನ ತಾಯ್ತನದ ನೆಲೆಯಲ್ಲಿ ಹರಿಸಬೇಕಲ್ಲವೇ? ಅವರ ಹಟ್ಟಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನ ಸರ್ಕಾರಗಳು ಒದಗಿಸಬೇಕಲ್ಲವೆ? ಅವರ ಹಟ್ಟಿಗಳನ್ನ ಕಂದಾಯಗ್ರಾಮಗಳನ್ನಾಗಿ ಮಾಡಬೇಕಲ್ಲವೇ? ಮುಟ್ಟಿನ ಸೂತಕದಲ್ಲಿ ಉಸಿರುಗಟ್ಟಿ ಒದ್ದಾಡುತ್ತಿರುವ ಹೆಣ್ಣು ಜೀವಗಳನ್ನ ಮೌಢ್ಯದಿಂದ ಹೊರತರಬೇಕಲ್ಲವೆ? ಹೀಗೆ ಅನೇಕಾನೇಕ ಸಮಸ್ಯೆಗಳಿಂದ, ಗೊಂದಲಗಳಿಂದ, ಕಂದಾಚಾರಗಳಿಂದ ಬುಡಕಟ್ಟು ಕಾಡುಗೊಲ್ಲರನ್ನ ಜನರನ್ನ ಪಾರುಮಾಡಬೇಕಿದೆ.
ಆ ನೆಲೆಯಲ್ಲಿ ನಾನಂತು ಯಾರು ಬಂದರೂ, ಯಾರು ಬರದಿದ್ದರೂ ಏಕಾಂಗಿಯಾದರೂ ಎಷ್ಟೇ ಸವಾಲುಗಳು ಎದುರಾದರೂ, ಏಕಾಂಗಿಯಾದರೂ ಸರಿ “ಮೌಢ್ಯ ಮುಕ್ತ ಹಟ್ಟಿ ಅಭಿಯಾನ”ಕ್ಕೆ ಒಂದು ಸಣ್ಣ ದಿಟ್ಟ ಹೆಜ್ಜೆ ಇಟ್ಟಾಗಿದೆ. ನೀವುಗಳೂ ನಮ್ಮೊಂದಿಗೆ ಹೆಜ್ಜೆ ಹಾಕುತ್ತೀರಿ ಎನ್ನುವ ವಿಶ್ವಾಸವೂ ನನಗಿದೆ. ಕಾಲದ ವಿಪ್ಲವಗಳಿಗೆ ದೂರ ದೂರ ಸರಿದ ಈ ಸಾಂಸ್ಕೃತಿಕ ಬಳ್ಳಿಗಳು ಒಳಗೊಳ್ಳುವ ಒಳಿತಿನ ದಿನಗಳಿಗಳಿಗಾಗಿ ಒಮ್ಮನದಲಿ ಕೆಲಸ ಮಾಡುವ.