ಶ್ರೀರಂಗಪಟ್ಟಣದ ಇಡೀ ಬೀದಿ ಶವಯಾತ್ರೆಗೆ ಸಜ್ಜಾದಂತೆ ಬಿಕೋ ಎನ್ನುತ್ತಿತ್ತು! ಪೇಟೆ ಬೀದಿಯಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಟಿಪ್ಪು ಕುದುರೆಯ ಪಕ್ಕೆಗೆ ಕಾಲು ತಾಕಿಸಿದ. ಸುಲ್ತಾನನ ಮನ ಅರಿತಂತೆ ಓಟಕ್ಕೆ ಬಿದ್ದ ಕುದುರೆ ಮರುಕ್ಷಣ ’ಲಾಲ್ ಮಹಲ್ ಮುಂದಿತ್ತು. ಮುಖ ಅವಮಾನದಿಂದ ಕಪ್ಪಿಟ್ಟು ಕಣ್ಣೆಂಬುವು ಹೊತ್ತಿ ಉರಿದ ಒಲೆಯ ಒಡಲ ಕೆಂಡದ ತುಂಡುಗಳಾಗಿದ್ದವು. ಮೂರನೇ ಮೈಸೂರು ಯುದ್ಧದ ಸೋಲು ನಾಕಾರು ದಿನಗಳ ಮುಂಚಿತವೇ ಮನದಟ್ಟಾಗಿತ್ತಾದರೂ ಮೀರ್ ಸಾದಿಕ್ ಎಂಬ ಅಸಹ್ಯದ ಹುಳ ಕಟುವಾದ ಒಪ್ಪಂದಕ್ಕೆ ಚಿತಾವಣೆ ಮಾಡಿ ಮರಿಯಾದೆಯನ್ನ ಕನ್ನಡದ ನಾಡ ಉದ್ದಗಲಕ್ಕೂ ಬೆತ್ತಲೆ ಮಾಡುತ್ತಾನೆ ಅಂತ ಅನಿಸಿರಲಿಲ್ಲ.
ಅಸಲು ತಿರವುಂಕೂರಿನ ಅರಸ ರಾಜಾ ರಾಮವರ್ಮನ ವಿರುದ್ಧ ಅಷ್ಟು ಬೇಗ ಕಾಲು ಕೆರೆದುಕೊಂಡು ಹೋಗಬಾರದಿತ್ತು ಅಂತ ಮತ್ತೊಂದು ಸಲ ಅನಿಸಿತು. ಕ್ರಾಂಗನೂರು ಮತ್ತು ಆಯಕೋಟ ಮಲಬಾರ್ ಮತ್ತು ಶ್ರೀರಂಗಪಟ್ಟಣಕ್ಕೆ ’ಕಾನಸ್ಟಂಟ್ನೋಪಾಲ್ ಇದ್ದ ಹಾಗೆ ಅನಿಸಿ ಆಸೆಗೆ ಬಿದ್ದಿದ್ದು ದುಬಾರಿಯಾಯಿತು.
ದುರುಳ ಇಂಗ್ಲಿಷರು ಮರೆಗೆ ನಿಂತು ಆಟ ಆಡಿಸುವದು ನಿಧಾನಕ್ಕೆ ಗೋಚರವಾಗುವ ಹೊತ್ತಿಗೆ ಯುದ್ಧ ಆರಂಭವಾಗಿತ್ತು. ಎಲ್ಲರೂ ಒಂದು ಕಡೆ ಸೇರಿ ಟಿಪ್ಪುವನ್ನ ಹಣಿಯಲು ನೋಡಿದರು! ಮೊದಲ ಹೊಡೆತಕ್ಕೆ ಜನರಲ್ ಮೆಡೋಸ್ ಹಿಮ್ಮೆಟ್ಟಿ ಸ್ವತಃ ಲಾರ್ಡ್ ಚಾರ್ಲ್ಸ್ ಕಾರ್ನಾವಾಲೀಸನೇ ಬರಬೇಕಾಯಿತು.
“ಸರಕಾರ್ ಏ ಖುದಾದಾದ್ ಎದುರು ನಿಂತ ಖಾಜಿಯ ಮುಜುರೆಗೆ ಟಿಪ್ಪು ಮರು ಸಲಾಂ ಮಾಡಿದನಾದರೂ ನಡೆಯಲ್ಲಿ ಜೀವಂತಿಕೆ ಇರಲಿಲ್ಲ. ಖಾಜಿ ಕೈಯಲ್ಲಿದ್ದ ಜಪಸರ ನೋಡಿ ನಮಾಜು ನೆನಪಾಯಿತು. ಅವಸರದಿಂದ ಒಳಗೆ ಹೋದ.
ಯಾವತ್ತೂ ದಿನದ ಐದು ಬಾರಿಯ ನಮಾಜು, ರಂಜಾನ್ ಉಪವಾಸ, ಕುರಾನ್ ಪಠಣ ತಪ್ಪಿಸಿಲ್ಲ. ಹಿಂದೂ ದೇವರುಗಳಿಗೂ ಕೇಳಿದ್ದು ಅಪ್ಪಣೆಯಾಗಿದೆ. ಸಪ್ತವಿದ ಧಾನ್ಯ, ಅಮವಾಸ್ಯೆಗೊಮ್ಮೆ ಎಳ್ಳೆಣ್ಣೆ, ಬಲಿ ನೀಡಲು ಕಪ್ಪು ಕುರಿ, ಬ್ರಾಹ್ಮಣರಿಗೆ ತಕ್ಕುದಾದ ಕಾಳು-ಕಡಿ,ಹಾಲು-ತುಪ್ಪ, ಆಕಳು ಏನೆಲ್ಲ ನೀಡಿರುವೆ ಆದರೂ ದಯಾಮಯನಾದ ಅಲ್ಲಾಹ್ ನನ್ನ ಮೇಲೆ ಮುನಿಸಿಕೊಂಡನೇಕೆ? ಅಂತ ಚಿಂತೆಗೆ ಬಿದ್ದ. ಇನ್ನೂ ನಾಳೆ ಒಪ್ಪಂದದಂತೆ ಮಕ್ಕಳನ್ನು ಬ್ರಿಟಿಷರಿಗೆ ಒಪ್ಪಿಸಬೇಕಲ್ಲ ಎಂಬುದು ನೆನೆದು ಮನಸು ಕಹಿ ಆಯಿತು. “ಸೈನ್ಯದಲ್ಲಿ ಸಾಮಾನ್ಯ ಕಾಲಾಳು ಆಗಿದ್ದ ನನ್ನಪ್ಪ ನನ್ನ ಅರಸನನ್ನಾಗಿ ಮಾಡಿದ, ’ಯಾ ಅಲ್ಲಾಹ್ ಅರಸನಾದ ನಾನು ನನ್ನ ಮಕ್ಕಳನ್ನ ಒತ್ತೆಯಾಳಾಗಿ ಶತೃಗಳ ಸುಪರ್ದಿಗೆ ಕೊಡುತ್ತಿರುವೆ” ಅಂತ ನೊಂದುಕೊಂಡ. ಒತ್ತೆಯಿಟ್ಟ ಮಕ್ಕಳನ್ನ ಕಾಲ ಸವೆದಂತೆ ಬಿಡಿಸಿ ತಂದೇನು!? ಆದರೆ ಅಲ್ಲಿ ಇರೋವಷ್ಟು ಹೊತ್ತು ಅವರು ಕಲಿಸಿದ ಭಾಷೆ, ಸಂಸ್ಕೃತಿಯಿಂದ ಮುಂದೆ ಹೊರತರಲಾದೀತಾ? ಅವರು ತಮ್ಮ ಭಾಷೆ ಕಲಿಸುವುದರಾ ಮೂಲಕವೇ ಗುಲಾಬುತನದ ಬೀಜ ಎದೆಯೊಳಗೆ ಬಿತ್ತಿ ಬಿಡುತ್ತಾರೆ ಎಂಬ ಸಂಗತಿ ಆ ಘಳಿಗೆಯಲ್ಲಿ ಎದೆಯನ್ನ ಒರೆಯ ಚೂರಿಯಂತೆ ಇರಿಯತೊಡಗಿತ್ತು.
ಊಟದ ಹೊತ್ತಿಗೆ ಸದಾ ಮಕ್ಕಳೊಂದಿಗೆ ಬೆರೆಯುತ್ತಿದ್ದ ಟಿಪ್ಪು ಈ ದಿನ ಆ ಸಮಯದಲ್ಲೇ! ಮಕ್ಕಳಲ್ಲೇ ಇಬ್ಬರನ್ನ ಒತ್ತೆಯಾಳುಗಳಾಗಿ ಆಯಬೇಕಲ್ಲ! ಯಾವ ತಂದೆಗೂ ಬೇಡ ಇಂತಹ ಘೋರ ಸನ್ನಿವೇಶ ಎಂದುಕೊಂಡ.
ಬೇಗಂ ಖದೀಜಾರಿಗೆ ಈಗಾಗಲೇ ಈ ಸುದ್ದಿ ಮುಟ್ಟಿರುತ್ತದೆ! ಒಂದು ಹೆಣ್ಣು ಮಗುವನ್ನಷ್ಟೇ ಅವರು ಹಡೆದರೂ ಖಾಂದಾನಿನ ಎಲ್ಲಾ ಕೂಸುಗಳನ್ನ ಮಡಿಲಲ್ಲಿಟ್ಟುಕೊಂಡು ಬೆಳೆಸಿದವರು. ಅವರನ್ನ ಹೇಗೆ ಸಮಾಧಾನಿಸುವದು? ಆಕೆಗೂ ಅರ್ಥವಾಗುತ್ತದೆ. ನೆಲಕ್ಕಾಗಿ ಜೀವ ಕೊಡಲೂ ಸಿದ್ಧವಿರುವಾಕೆ. ಆದರೆ ಒಪ್ಪಿಸಬೇಕಿರುವುದು ಆಕೆಯನ್ನಷ್ಟೇ ಅಲ್ಲ! ಜೀವ ಒತ್ತೆ ಇಟ್ಟು ಹಡೆದ ರುಖ್ಹಯ್ಯ ಬಾನುವನ್ನ. ಬೇಗಂ ರುಖ್ಹಯ್ಯ ಬಾನು ಈಗಾಗಲೇ ಹಾಸಿಗೆ ಹಿಡಿದು ಎರಡು-ಮೂರು ದಿನವಾಯಿತು! ಸುಲ್ತಾನನಿಗೆ ಜನಾನದೊಳಗೆ ಕಾಲಿಡುವ ಧೈರ್ಯವಾಗಲಿಲ್ಲ!
ಜನಾನಾದ ದಿಕ್ಕಿಗೆ ಬೆನ್ನು ಮಾಡಿ ಜಮಾದಾರ ಖಾನದತ್ತ ನಡೆದ. ಅಲ್ಲಿ ಹರವಿದ ಹತ್ತಾರು ಖಡ್ಗ, ಗುರಾಣಿ, ಕೈಕುಬುಸ, ಎದೆ ಕವಚ, ಶಿರಸ್ತ್ರಾಣ ಎಲ್ಲವನ್ನ, ನೋಡಿದ, ತಡಕಿದ, ಧರಿಸಿ ನೋಡಿದ ಏನು ಮಾಡಿದರೂ ಮನಸು ತಹಬಂದಿಗೆ ಬರಲೊಲ್ಲದು. ಕೆಂಡದ ಮೇಲೆ ಕುಳಿತವನಂತೆ ಸುಲ್ತಾನ ಚಡಪಡಿಸುವದಾ ಕಂಡು ಶಸ್ತ್ರಾಗಾರದ ಪಹರೆಗೆ ನಿಂತ ಕಾಲಾಳು ಕೂಡ ಆತಂಕಗೊಂಡ.
ಟಿಪ್ಪುವಿನ ಹಿಂದೆ ನೆರಳಂತೆ ಅಲೆಯುತ್ತಿದ್ದ ದಾರೋಗನನ್ನು ಕರೆದು ಒರೆಯಲ್ಲಿದ್ದ ಖಡ್ಗ ತೆಗೆದು ಹಿಡಿಕೆ ಸರಿ ಮಾಡಲು ಹೇಳಿದ. ’ಅಲ್ಲಾಹ್ನ ನಾಮದ ಹಿಡಿಕೆಯ ಈ ಖಡ್ಗದಿಂದ ಅದೆಷ್ಟು ಯುದ್ಧ ಮಾಡಿದೆ? ಅದೆಷ್ಟು ತಲೆ ಉರುಳಿದವು? ಅದೆಷ್ಟು ಸೈನಿಕರ ಮಕ್ಕಳು ಅನಾಥರಾದರು ಎಂಬುದು ನೆಪ್ಪಿಗೆ ಬಂತು. ಆ ಪಾಪದ ಪ್ರಾಯಶ್ಚಿತ್ತಕ್ಕೆ ಮಕ್ಕಳೀಗ ಅಗಲುತ್ತಿದ್ದಾರೆ ಎನಿಸಿಬಿಟ್ಟಿತು.
“ಮಗರೀಬ್ ನಮಾಜಿನ ಸಮಯವಾಗಿ ವಿಶ್ರಾಂತಿ ಕೊಠಡಿಯೊಳಗೆ ಹೋದ. ನಮಾಜು ಮುಗಿಸುವ ಹೊತ್ತಿಗೆ ರಾತ್ರಿಯ ಊಟಕ್ಕೆ ಕರೆಯಲು ಬಂದ ದೂತ ಬೇಗಂರ ವಿನಂತಿಯನ್ನು ಅರುಹಿ ಮರೆಯಾದ. ಸಂಜೆಯ ಸಭೆ ಟಿಪ್ಪುವಿಗಾಗಿ ಕಾಯ್ದು ಏನೊಂದು ಮಾತಿಲ್ಲದೆ ಬರಖಾಸ್ತಾಯಿತು. ಮುನ್ಷಿ, ಖಾಜಿ, ಭಕ್ಷಿ ಟಿಪ್ಪುವಿನ ಆಪ್ತ ಸೇನಾನಿ ಹಬೀಬುಲ್ಲಾ, ದಿವಾನ್ ಪೂರ್ಣಯ್ಯ, ಕಮುರುದ್ದೀನ್, ಆಪ್ತ ಓಸ್ಮೊಖಾನ್ ಸೇರಿದಂತೆ ಸಮಸ್ಥರ ಮುಖದ ಮೇಲೆ ನಾಳೆ ಹೇಗೋ? ಎಂಬ ಆತಂಕದ ಕಂದೀಲು ಕಣ್ಣಲಿ ಉರಿಯುತ್ತಲೇ ಇತ್ತು. ಅವರೆಲ್ಲ ಅಲ್ಲಿಂದ ಎದ್ದು ಹೋದರು. ಹೋಗುವಾಗ ಅವರು ಸಲ್ಲಿಸಿದ ಮುಜುರೆಗೂ ಟಿಪ್ಪು ಪ್ರತಿಕ್ರಯಿಸಲಿಲ್ಲ. ಅಸಲು ಟಿಪ್ಪು ಸಾಹೇಬ್ ಈ ಜಗತ್ತಿನಲ್ಲೇ ಇರದೇ ಆತನ ಮನಸು ಹ್ಯೂಮೋ ಹಕ್ಕಿಯಂತೆ ಜಗತ್ತಿನೆಲ್ಲೆಡೆ ವಿನಾಕಾರಣ ಸುತ್ತುತ್ತಿತ್ತು.

ಟಿಪ್ಪು ಜನಾನವನ್ನು ಪ್ರವೇಶಿಸಿದಾಗ ಮಬ್ಬುಗತ್ತಲಿತ್ತು. ಗೋಡೆಯ ಅಂಚಿಗೆ ಅಂಟಿಸಿದಂತಿದ್ದ ಕುಸುರಿ, ಕಲಾವಂತಿಕೆಯಿಂದ ಕೆತ್ತಿದ್ದ ಪುಟ್ಟ ಬೆಳ್ಳಿ ಕಂಬಗಳ ಮೇಲೆ ಮುಷ್ಠಿ ಗಾತ್ರದ ಮೊಂಬತ್ತಿಗಳನ್ನು ಒತ್ತಿಸಲಾಗಿತ್ತು. ಆ ಮೊಂಬತ್ತಿಯ ಬೆಳಕಿನ ಕುಡಿ ಬೀಸುವ ಗಾಳಿಗೆ ಹೋಲಾಡಿ ನಂದದಂತೆ ಇಂಗ್ಲಿಷ್ ಗಾಜಿನ ಗೋಲಗಳನ್ನು ಇಡಲಾಗಿತ್ತು. ಆ ಬೆಳಕಿನಲ್ಲೇ ಮುಖ್ಯದ್ವಾರ ಹಾಯ್ದು ನೃತ್ಯ ಶಾಲೆಯಂತಿದ್ದ ಉದ್ದಗಲದ ಕೋಣೆಯನ್ನ ದಿಟ್ಟಿಸಿದ ಹತ್ತಾರು ಹೆಣ್ಣು ಬಾಲೆಯರು ನೃತ್ಯದ ತರಬೇತಿಯಲ್ಲಿ ನಿರತರಾಗಿದ್ದರು. ಅವರ ಕಾಲಿಗಿದ್ದ ಗೆಜ್ಜೆ, ನಾಟ್ಯದಲ್ಲಿದ್ದ ನಾವಿನ್ಯತೆ ಟಿಪ್ಪುವನ್ನು ಸೆಳೆಯಲಿಲ್ಲ. ಅದೆಷ್ಟೊ ರಾತ್ರಿ ಘಮಘಮಿಸುವ ಅತ್ತರಿನೊಂದಿಗೆ ಬೇಗಂ ಖದೀಜಾಳೊಂದಿಗೆ ಕಳೆಯಲು ಬಂದೊತ್ತಿಗೆ ಎಳೆ ಬಾಲೆಯರು ಮಾಡುತ್ತಿದ್ದ ನೃತ್ಯ ಕಣ್ತುಂಬಿ ಉಲ್ಲಸಿತನಾಗಿ ಕೊರಳ ಮುತ್ತಿನ ಸರವನ್ನು ಕಿತ್ತಿ ಕೊಟ್ಟದ್ದಿದೆ! ಆದರೀವತ್ತು ಯಾವದಕ್ಕೂ ಕಣ್ಣು ಕೂಡುತ್ತಿಲ್ಲ. ಒಂದೆಜ್ಜೆ ಮುಂದೆ ಇಟ್ಟರೆ ಜನಾನಾದ ಪಾಕಶಾಲೆ. ಹತ್ತಾರು ಜನ ಅಡಿಗೆಯಲ್ಲಿ ನಿರತರಾಗಿದ್ದರು ಸುಲ್ತಾನನ ಕಂಡು “ಘೋಷಾದೊಳಗೆ” ಅವಿತು ಬರೀ ಕಣ್ಣವೆ ತೆಗೆದು ನೋಡಿದರು. ಬೇಗಂಳ ಕೋಣೆಯ ಮುಂದೆ ಕಾವಲಿಗೆ ನಿಂತಿದ್ದ ಇಬ್ಬರು ತೃತೀಯ ಲಿಂಗಿಗಳು ಕಂಠ ಏಕ ಮಾಡಿ ಸುಲ್ತಾನನ “ಫರಾಕು” ಹೇಳಿದರು. ಬರೀ ನೆಲದ ಮೇಲೆ ಮಲಗಿ ಎದೆ ಹಿಡಿದಿದ್ದ ರುಖ್ಹಯ್ಯ ಬಾನು ಸುಲ್ತಾನರಿಗೆ ತನ್ನ ಬೇಗುದಿ ತಿಳಿಯದಿರಲೆಂದು ಸರಸರನೆ ಹಾವಂತೆ ಸರಿದು ಶಯನಾಗಾರದ ಸುಖಾಸನದ ಮೇಲೆ ಪವಡಿಸಿದಂತೆ ನಟಿಸಿದಳು.
ಒಳಗೆ ಬಂದ ಟಿಪ್ಪು ಆಕೆಯ ತಲೆ ದಿಂಬಿಗೆ ಕೂತು ಹಣೆಯ ಮೇಲೆ ಕೈ ಇಟ್ಟ, ಹೆಂಚು ತಾಗಿದಂತಾಯಿತು! ಕೈ ಕಣ್ಣೆವೆ ತಲುಪಿದರೆ ನೀರು ಖೋಡಿಯಂತೆ ಹರಿಯುವದಾ ಕಂಡು ಸುಲ್ತಾನ ವಿಚಲಿತನಾದ. ಎಷ್ಟಾದರೂ ತಾಯಿ ಕರಳು. ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದು ನೂರಾರು ಜನರ ಗೋಣು ಮುರಿದು ಅಧಿಕಾರ ಹಿಡಿದವರ ಮನೆಗೆ ಹಸುಗೂಸುಗಳನ್ನು ಕಳುಹಿಸಬೇಕು ಎಂಬುದನ್ನ ಕೇಳಿದಾಗಿನಿಂದ ಜನಾನಾದೊಳಗಿನ ಮೂವ್ವರು ರಾಣಿಯರು ಹೀಗೆಯೇ ಕಣ್ಣೀರು ಹರಿಸಿದ್ದರು. ಮಕ್ಕಳ ಸುಪರ್ದಿಗಿದ್ದ ಖದೀಜಾ ಬೇಗಂರಂತೂ ಒಂದು ತುತ್ತು ಬಾಯಿಗಿಟ್ಟಿದ್ದಿಲ್ಲ ಆ ಸುದ್ದಿ-ಸಮಾಚಾರ ಕಿವಿಗೆ ಬಿದ್ದ ಮರುಕ್ಷಣದಿಂದ. ಊಟವಾಯಿತೋ? ಇಲ್ಲ ನಮ್ಮ ಬರುವಿಗಾಗಿ ಬೇಗಂ ಕಾಯುತ್ತಿರುವರೋ? ಟಿಪ್ಪುವಿನ ಗಂಟಲೊಳಗಿಂದ ಒಲ್ಲದ ಮನಸಿಂದ ಮಾತು ಹೊರಟಿತು. ಬೇಗಂಳ ಗಂಟಲು ಸಹಕರಿಸಲಿಲ್ಲ. ಗಂಟಲುಬ್ಬಿ ಮಾತು ಹೊರಡಲಿಲ್ಲ. ಸುಮ್ಮನೆ ಸುಲ್ತಾನನ ಮುಂಗೈ ಹಿಡಿದಳು. ಎಷ್ಟಾದರೂ ವೀರ ಸೇನಾನಿಯ ಮಗಳು. ಕಣ್ಣೀರನ್ನ ಕೊಲ್ಲಿ ಶೂರತನದಿಂದ ವರ್ತಿಸುವದನ್ನ ಆಕೆಗೆ ಯಾರೂ ಕಲಿಸಿಕೊಡಬೇಕಿಲ್ಲ. “ಚಿಂತೆ ಬೇಡ ಬಹುಬೇಗ ಶಹಜಾದೆಯವರು ಮರಳಿ ಲಾಲ್ ಮಹಲ್ ಅಂಗಳ ತುಳಿಯುತ್ತಾರೆ ಕಳವಳ ಬೇಡ” ಸುಲ್ತಾನ್ ಸಾಹೇಬ್ ಸಮಾಧನಾದ ಮಾತು ಹೇಳಬೇಕೆಂದುಕೊಂಡ. ಆದರೆ ಗಂಟಲೊಳಗಿನ ದನಿ ನಾಲಗೆಯ ಮೇಲೆ ಮಾತಾಗಿ ಒಡಮೂಡಲಿಲ್ಲ! ಟಿಪ್ಪು ಆಗಲೇ ಲೆಕ್ಕಾಚಾರ ಹಾಕಿಯಾಗಿತ್ತು. ಕಳಿಸುವದಾದರೆ ಶಹಜಾದೆ ಮುಇಜುದ್ದೀನನ್ನೆ ಅಂತ. ಜೊತೆಗೆ ಇನ್ನೋರ್ವರನ್ನ ಆಯ್ದರೆ ಆದೀತು. ಆರನೇ ವರ್ಷಕ್ಕೆ ಖಡ್ಗ ಹಿಡಿದು ಹಠಮಾಡಿ ಕುದುರೆ ಪಳಗಿಸಿ ಸೈನಿಕರ ನೆರವಿಲ್ಲದೆ ಶ್ರೀರಂಗಪಟ್ಟಣದ ಬೀದಿಯನ್ನ, ನೈಋತ್ಯಕ್ಕಿದ್ದ ಯುದ್ಧ ಭೂಮಿಯನ್ನ ಸುತ್ತಿ ಬರುವ ಪುಟ್ಟ ಪೋರ ಮುಇಜುದ್ದೀನನಿಗೆ ಈಗ ಏಳು ವರ್ಷ. ಬ್ರಿಟಿಷರ ಸುಪರ್ದಿಯಲ್ಲಿದ್ದರೂ ಶಹಜಾದೆ ಎದೆ ಒಡೆಯಲಾರ.ಜೊತೆಗಿರುವ ಸಹೋದರನಿಗೂ ಧೈರ್ಯ ತುಂಬಿ ಪರ್ಷಿಯನ್ ಕತೆಗಳನ್ನ ಹೇಳಿ ರಾತ್ರಿ ತಬ್ಬಿ ಮಲಗಿಸಿ ದಿಟ್ಟತನದಿಂದ ತಂದೆಯ ಹಾದಿ ಕಾಯುವ ಧೀರ ಹುಡುಗನಾತ.ಮುಖ ಮೂಗು ಎತ್ತರದಲ್ಲಿ ಥೇಟ್ ತಾತ ಹೈದರನನ್ನು ಹೋಲುವ ಕೂಸದು.ಇರುವ ಹುಬ್ಬನ್ನ ತೆಗೆದರೆ ತಾತನದೇ ಪ್ರತಿರೂಪ.
“ಬೇಗಂ..” ಸುಲ್ತಾನನ ಮಾತಿಗೆ ಬೆಚ್ಚಿ ಕಣ್ತೆರೆದಳು. ಹಿಡಿದ ಮುಂಗೈ ಅಲ್ಲೇ ಇತ್ತು. ಹೆಚ್ಚೇನು ಮಾತುಗಳು ವಿನಿಮಯವಾಗಲಿಲ್ಲ. ಮೌನವೆಂಬುದು ಅವರಿಬ್ಬರ ಮಧ್ಯೆ ರಾಜ್ಯಬಾರ ಮಾಡುತ್ತಿತ್ತು. ಟಿಪ್ಪು ರಾತ್ರಿಯ ಭೋಜನ ನಿರಾಕರಿಸಿದ. ಜನಾನಾದ ಶಯನಾಗಾರದ ಒಂದು ಕೋಣೆಯ ನೆಲ ಹಾಸಿನ ಮೇಲೆ ಅಂಗಾತ ಮಲಗಿದ. ಭಾರತ ಭೂಮಂಡಲದ ಧಣಿವರಿಯದ ಸುಲ್ತಾನ ಎರಡು ಯುದ್ಧ ಸೋತರು ಎದೆಗುಂದದ ವೀರ, ಮಕ್ಕಳ ಒತ್ತೆ ಮತ್ತು ಒದಗಿದ ಅವಮಾನಕ್ಕೆ ಹೈರಾಣಾಗಿ ನೆಲದ ಹಾಸಿಗೆಯ ಮೇಲೆ ಮಲಗಿದ್ದನ್ನ ನೋಡಿ ಬೇಗಂ ರುಖ್ಹಯ್ಯ ಬಾನು ಸರ್ವ ಶಕ್ತನಾದ ಅಲ್ಲಾಹ್‌ನನ್ನು ಶಪಿಸತೊಡಗಿದಳು. ಆಕೆಯ ಗಂಟಲೊಳಗಿಂದ ಅರ್ಥವಿಲ್ಲದ ಹಲವು ಪದಗಳು ಹುಟ್ಟಿ ಆತಂಕದಿಂದ ಆಕೆಯ ಮೈಯಲುಗಿ ಕಂಪಿಸತೊಡಗಿದಳು. ಕ್ಷಣ, ಕ್ಷಣ ಆಕೆಯ ಉದ್ವೇಗ ಹೆಚ್ಚಾಗಿ ಸುಲ್ತಾನ ಎದ್ದು ಸಹಾಯಕ್ಕೆ ಧಾವಿಸುವ ಹೊತ್ತಿಗೆ ಮಂಚದಿಂದ ಉರುಳಿ ಕೆಳಗೆ ಬಿದ್ದಳು. ಸುಲ್ತಾನ್ ಸಾಹೇಬ್ ದಾಸಿ ಹಸೀನಾಳನ್ನು ಕೂಗಿ ಬೇಗಂರನ್ನು ತಲುಪಿ ಮುಂಗೈ ಮುಟ್ಟೋವತ್ತಿಗೆ ಬೇಗಂ ರುಖ್ಹಯ್ಯ ಬಾನುರ ಜೀವದ ಹಕ್ಕಿ ರೆಕ್ಕೆ ಪಟಪಟಿಸಿ ಹಾರಿ ಹೋಗಿತ್ತು. ಸುಲ್ತಾನನ ಕಣ್ಣಲ್ಲಿ ಹನೀ ನೀರು ಉಕ್ಕದೆ ದುಖಃವೆಂಬುದು ಎದೆಯೊಳಗೆ ಹೆಪ್ಪುಗಟ್ಟಿ ಸೇರಿರುವ ಜನಾನಾದ ಅಷ್ಟು ಜನರ ಎದುರಿಗೆ ಅಸಾಹಯಕನಾಗಿ ಗೋಡೆಗೆ ಒರಗಿದ.

ಸೂರ್ಯೋದಯಕ್ಕೂ ಮೊದಲೇ ಎದ್ದೇಳುತ್ತಿದ್ದ ಸುಲ್ತಾನನಿಗೆ ರಾತ್ರಿಯಿಡೀ ನಿದ್ದೆಯೇ ಇರಲಿಲ್ಲ. ಜನಾನಾದೊಳಗಿಂದ ಒಂದು ಅಳುವಿನ ದನಿ ಹೊರಗೆ ಬಾರದಂತೆ ಕಟ್ಟಪ್ಪಣೆ ಮಾಡಿದ್ದ.
ಬೆಳಗ್ಗೆದ್ದರೆ ಶ್ರೀರಂಗಪಟ್ಟಣದ ದರ್ಬಾರಿಗೆ ನಡೆದು ಬರುವ ಬ್ರಿಟಿಷ್ ಅಧಿಕಾರಿಗೆ ಮೂರು ಕೋಟಿ ಮೂವತ್ತು ಲಕ್ಷದ ಹಣದಲ್ಲಿ ಬೊಕ್ಕಸದಲ್ಲಿ ಇರುವಷ್ಟು ’ಪಗೋಡ’ದ ಮೊತ್ತ ಕೊಟ್ಟು ಉಳಿದಿದ್ದಕ್ಕೆ ಕರಾರು ಬರೆಯಿಸಿ ಎರಡು ಮಕ್ಕಳನ್ನ ಒತ್ತೆ ಇಟ್ಟು ಅವರೊಂದಿಗೆ ಕಳುಹಿಸುವ ಘಳಿಗೆಯವರೆಗೆ ಏನೇನೂ ಘಟಿಸುಂತಿಲ್ಲ ಅಂತ ಹಲ್ಲು ಕಚ್ಚಿ ಸಹಿಸುತ್ತಿದ್ದ. ಮುಂಜಾನೆಯ ಫಜರ್ ನಮಾಜು, ಜಪಸರದ ಧ್ಯಾನ, ಕುರಾನ್ ಪಠಣ ಹೂಹೂಂ ಯಾವದಕ್ಕೂ ಮನಸು ಕೂಡಲಿಲ್ಲ! ಮೈಲಿಗೆಯಾದ ಮನಸು ವಿಹ್ಹಲಗೊಂಡಿತ್ತು. ಬೆಳಕರಿಯುವ ಮುಂಚೆಯೇ ಅರಮನೆಗೆ ಧಾವಿಸಿ ಉಟ್ಟ ಬಿಳಿ ಅಂಗಿ, ಇಜಾರದಲ್ಲೇ ಸ್ನಾನ ಮುಗಿಸಿದ. ವಜ್ರದ ಗುಂಡಿ ಹಚ್ಚಿದ ಬಿಳಿಯ ನಿಲುವಂಗಿ ಧರಿಸಿ, ಅದರ ಮೇಲೊಂದು ಮಣಿಕಟ್ಟಿನ ಪಟ್ಟಿ ಜೋಡಿಸಿದ್ದ ಇನ್ನೊಂದು ಅಂಗಿ ಧರಿಸಿ ದೊಗಲೆಯಾದೊಂದು ಇಜಾರ ಉಟ್ಟು ಅವಸರದಲ್ಲೇ ’ದಿವಾನೆ ಆಮ್ ದರ್ಭಾರಿಗೆ ಧಾವಿಸಿದ. ಅಷ್ಟೊತ್ತಿಗೆ ಹಿರಿಯ ಮುನ್ಷಿ, ಭಕ್ಷಿ, ಖಾಜಿ ಜೊತೆಗೆ ದರೋಗ ಹುದ್ದೆಯ ಬಹುತೇಕರು ಆಗಮಿಸಿ ದರ್ಬಾರು ತುಂಬತೊಡಗಿತ್ತು. ಆಪ್ತ ಸೇನಾಧಿಕಾರಿ ಹಬೀಬುಲ್ಲಾ ಟಿಪ್ಪುವಿನ ಮುಖವನ್ನು ನೇರ ನೋಡಲಾಗದೆ “ಖಾವಂದ್ ಆಂಗ್ಲ ಅಧಿಕಾರಿ ತಾವು ದರ್ಬಾರಿಗೆ ಬಂದ ಮರುಕ್ಷಣ ಸುದ್ದಿ ತಲುಪಿಸಲು ಹೇಳಿದ್ದಾರೆ” ಎಂದು ಅರುಹಿ ತಲೆ ತಗ್ಗಿಸಿದ.
“ಕರೆಯಿರಿ ಅವರನ್ನ ಟಿಪ್ಪು ಸಾಹೇಬನ ನಸೀಬದಲ್ಲಿ ಇದ್ದಂತಾಗಲಿ” ಎಂದು ನಿಟ್ಟುಸಿರಿನಲಿ ಆಜ್ಞೆ ಹೊರಡಿಸಿದ. ನಂತರ ಏನೋ ನೆನಪಾದಂತಾಗಿ ಅರಮನೆಯ ಆಪ್ತ ಓಸ್ಮೋನ್ ಖಾನನ್ನು ಕರೆದು ಮಕ್ಕಳು ಮೈಸೂರು ಸಾಮ್ರಾಜ್ಯ ದಾಟಿ ಹೋಗುವವರೆಗೂ ಅವರನ್ನ ಕಾಳಜಿ ಮಾಡಿ ಕಳುಹಿಸಲು ಸೂಕ್ತ ಏರ್ಪಾಟು ಮಾಡಲು ಹೇಳಿದ.
ಸಾಧ್ಯವಾದರೆ ಮಕ್ಕಳ ಜೊತೆಗೆ ನೀವು ಹೋಗಿ ಎಂದು ಅನುನಯಿಸಿದ. ಶಹಜಾದೆ ಮುಇಜುದ್ದೀನನ ನೆಚ್ಚಿನ ಕುದುರೆ “ರೇಣು”ಗೆ ಮಾಲಿಷ್ ಮಾಡಿಸಿ ಅವನ ಜೊತೆ ಕಳುಹಿಸುವ ಏರ್ಪಾಡು ಮಾಡಿಸಿದ. ಮುಇಜುದ್ದೀನ್ ಜೊತೆ ಹೊರಡಲು ಸಿದ್ಧನಾದ ಇನ್ನೋರ್ವ ಪುತ್ರ ಅಬ್ದುಲ್ ಖಾಲಿಕ್‌ಗೆ ಅಮ್ಮೀ ಮತ್ತು ಖರ್ಜೂರವೆಂದರೆ ಪ್ರಾಣ! ಅವನ ಅಮ್ಮೀಯಂತೂ ಈಗ ಅವನಿಂದ ಶಾಶ್ವತ ದೂರ! ಖರ್ಜೂರವಾದರೂ ಅವನ ಜೊತೆಗಿರಲಿ. ಅವನ ಜೊತೆ ವಿದೇಶದಿಂದ ತಂದ ಎಂದೂ ಕೆಡದ ಖರ್ಜೂರ ಕಳಿಸಲು ಏರ್ಪಾಡು ಮಾಡಿದ.
ಆಂಗ್ಲರ ಅಧಿಕಾರಿ ಬರುವ ಮುಂಚೆ ಒತ್ತೆಯಾಳಾಗಿ ಹೊರಟ ಇಬ್ಬರು ಮಕ್ಕಳಿಗೆ ಎರಡು ಮಾತು ಹೇಳಬೇಕೆನಿಸಿತು. ಅವರನ್ನ ದರ್ಬಾರಿನ ಬಲಕ್ಕೆ ಇದ್ದ ವಿಶ್ರಾಂತಿ ಕೊಠಡಿಗೆ ಕರೆಯಿಸಿದ. ಅಬ್ದುಲ್ ಖಾಲಿಕ್‌ನ ಕಣ್ಣಲ್ಲಿ ಚೂರು ಗೊಂದಲ, ಕಂಡೂ ಕಾಣದಂತಹ ಭಯ ಇದ್ದದ್ದು ನಿಜವಾದರೂ ಶಹಜಾದೆ ಮುಇಜುದ್ದೀನ್‌ನ ಕಣ್ಣಲ್ಲಿ ಚೂರು ಅಳುಕು ಇರಲಿಲ್ಲ! ಒಳಗೆ ಬಂದ ಮರುಕ್ಷಣ “ಅಬ್ಬಾಜಾನ್ ಅಂತ ತೆಕ್ಕೆಗೆ ಬಿದ್ದ ಮಕ್ಕಳನ್ನು ಕಕ್ಕಲಾತಿಯಿಂದ ಬಿಗಿದಪ್ಪಿದ. ಪುಟ್ಟ ಹಕ್ಕಿಮರಿಯಂತಹ ಕೂಸುಗಳನ್ನ ಆ ಆಂಗ್ಲರು ಹೇಗೆ ನಡೆಸಿಕೊಂಡಾರು? ಅನಿಸಿತು.
ಮರುಕ್ಷಣ ಇಂಡಿಯಾದ ಸುಲ್ತಾನನೊಬ್ಬನ ಮಕ್ಕಳನ್ನು ಚಂದಗೆ ನೋಡಿಕೊಳ್ಳದೆ ಇತಿಹಾಸದುದ್ದಕ್ಕೂ ಕಪ್ಪು ಚುಕ್ಕೆಗೆ ಪಾತ್ರವಾಗುವ ದಡ್ಡತನವನ್ನ ಮುತ್ಸದ್ಧಿ ಆಂಗ್ಲರು ಮಾಡಲಾರರು ಎನಿಸಿತು.
ಬಗುಲಲ್ಲಿ ಇದ್ದ ಪರ್ಷಿಯನ್ ಭಾಷೆಯ ಪುಟ್ಟ ಕುರಾನಿನ ಪ್ರತಿಯನ್ನ ಮಕ್ಕಳಿಗೆ ಕೊಡುತ್ತ “ಧೈರ್ಯಗುಂದಬೇಡಿ, ನಿಮ್ಮ ಅಬ್ಬಾಜಾನ್ ನಿಮ್ಮನ್ನ ಆಂಗ್ಲರ ಪಾಲು ಮಾಡುತ್ತಿದ್ದಾನೆಂದು ಬೇಸರ ಪಟ್ಟುಕೊಳ್ಳಬೇಡಿ, ಈ ನಾಡು ಇರೋತನಕ ನಿಮ್ಮ ತ್ಯಾಗವನ್ನು ನೆನೆಯುತ್ತದೆ. ತಂದೆಗಾಗಿ ತಾಯ್ನೆಲಕ್ಕಾಗಿ ಈ ಇಬ್ಬರೂ ಎದೆಗುಂದದೆ ಬ್ರಿಟಿಷರ ಸುಪರ್ದಿಗೆ ಹೋಗಿದ್ದರು ಎಂಬುದನ್ನ ಇತಿಹಾಸ ಬರೆದಿಟ್ಟುಕೊಳ್ಳುತ್ತದೆ. ಮಕ್ಕಳೇ, ಸೇಂದಿ ಸರಾಯಿಗೆ ರಾಜ್ಯದಲ್ಲಿ ಅನುಮತಿ ಕೊಟ್ಟರೆ ನಾಳೆಯೇ ಈ ಸುಲ್ತಾನ ಮಕ್ಕಳನ್ನು ತನ್ನ ಸಾಮ್ರಾಜ್ಯಕ್ಕೆ ಮರಳಿ ಕರೆ ತರಬಲ್ಲ! ಆದರೆ ಪ್ರಜೆಗಳ ಎದೆಗೆ ವಿಷವುಣಿಸಿ ಸ್ವಂತ ಮಕ್ಕಳ ಕಾಯ್ವ ಸ್ವಾರ್ಥ ನನಗಿಲ್ಲ, ಇಂದಲ್ಲ ನಾಳೆ ಆ ಖೂಳ ಆಂಗ್ಲರನ್ನ ಸದೆ ಬಡೆಯುತ್ತೇನೆ ನೀವು ಹಕ್ಕಿಯಂತೆ ಮತ್ತೆ ಹಾರಿ ನಮ್ಮ ಮಣ್ಣಿಗೆ ಬರಲಿದ್ದೀರಿ” ಎಂದು ಭಾವುಕನಾಗಿ ನುಡಿಯುತ್ತ ಇಬ್ಬರೂ ಮಕ್ಕಳ ಹೆಗಲ ಮೇಲೆ ಕೈಯಿಟ್ಟು ಹಣ್ಣೆತ್ತಿಗೆ ಮುತ್ತು ಕೊಟ್ಟ. ಹೊರಗೆ ಹೊಗಳುಭಟ್ಟರ ಬಹುಪರಾಕ್‌ಗೆ ಆಂಗ್ಲರ ಅಧಿಕಾರಿ ಬಂದಿರಬಹುದೆಂಬ ಎಚ್ಚರಿಗೆ ಎದೆಯೊಳಗಿನ ನೂರು ಆತಂಕಗಳ ಮರೆಗಿಟ್ಟು ಬಂದು ವ್ಯಾಘ್ರ ಸಿಂಹಾಸನರೂಢನಾದ.
ಚಾರ್ಲ್ಸ್ ಲಾರ್ಡ್ ಕಾರ್ನ್ವಾಲೀಸ್ ತನ್ನ ನೂರು ಸೈನಿಕರ ಪಡೆಯೊಂದಿಗೆ ಆಗಮಿಸಿದ್ದ. ಆತನ ಸೈನ್ಯದೊಂದಿಗೆ ಎರಡು ಮಜಬೂತಾದ ಸಿಂಗರಿಸಿದ ಚೀನಾದ ಬಿಳಿಯ ಆನೆಗಳಿದ್ದವು. ಆ ಆನೆಗಳ ಮೇಲೆ ರಾಜಕುಮಾರರನ್ನು ಕೂಡ್ರಿಸಿ ಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತ ತುಂಬಾ ಗೌರವದಿಂದ ಕರೆದೊಯ್ಯುತ್ತೇವೆ ಎಂಬ ಅಭಯ ನೀಡಿದ. “ಸುಲ್ತಾನ್ ಸಾಹೇಬ್ ನನಗೂ ಒಬ್ಬನೇ ಒಬ್ಬ ಮಗನಿದ್ದಾನೆ! ಆದ್ದರಿಂದ ಒಬ್ಬ ತಂದೆಗೆ ತನ್ನ ಸಂತಾನದ ಬಗ್ಗೆ ಇರುವ ಪ್ರೀತಿಯನ್ನ ನಾನು ತೀವ್ರವಾಗಿ ಅನುಭವಿಸಬಲ್ಲೆ! ಆದರೆ ನನ್ನ ಮಗ ಕೂಡ ಅನುಭವಿಸಿರದ ಪ್ರೀತಿಯಿಂದ ನಿಮ್ಮ ಮಕ್ಕಳು ನಮ್ಮಲ್ಲಿ ಇರೋಷ್ಟು ದಿನವೂ ಪ್ರೀತಿಸಲ್ಪಡುತ್ತಾರೆ! ಅನುಮಾನ ಬೇಡ, ನಿಮ್ಮ ಸ್ವಾಭಿಮಾನ ದೊಡ್ಡದು ನಾವದನ್ನು ತುಂಬಾ ಗೌರವಿಸುತ್ತೇವೆ, ಇಲ್ಲಿಂದ ಮದರಾಸಿಗೆ ಅಲ್ಲಿಂದ ಕಲ್ಕತ್ತಾಗೆ ಮಕ್ಕಳು ಹೋಗುತ್ತಾರೆ ಅದಕ್ಕಾಗಿ ಸಮಸ್ತ ಏರ್ಪಾಡು ಮಾಡಲಾಗಿದೆ” ಲಾರ್ಡ್ ಕಾರ್ನವಾಲೀಸ್ ನಿರೀಕ್ಷೆಗಿಂತ ತುಸು ಹೆಚ್ಚೇ ಕಕ್ಕುಲಾತಿಯಿಂದ ಮಾತನಾಡಿದ.
ಆಂಗ್ಲ ಅಧಿಕಾರಿಗಳಿಗೆ ಮತ್ತು ಪರಿವಾರದವರಿಗೆ ಉಪಚಾರಗಳಾದವು. ಸ್ವತ್ತನ್ನು ಲೆಕ್ಕ ಬರೆಸಿ ಬಾಕಿ ಮೊತ್ತಕ್ಕಾಗಿ ಕರಾರು ಪತ್ರ ಬರೆಸಲಾಯಿತು. ಆ ಪತ್ರಕ್ಕೆ ಟಿಪ್ಪು ನಿಟ್ಟುಸಿರು ಬಿಡುತ್ತ ಆದೇಶ ಪತ್ರದ ಮೇಲು ತುದಿಯಲ್ಲಿ ’ಬಿಸ್ಮಿಲ್ಲಾ ಇರ್ ರಹಮಾನ್ ಇರ್ ರಹೀಮ್ ಎಂದು ’ತೋಗ್ರಾ ಲಿಪಿ ಶೈಲಿಯಲ್ಲಿ ಬರೆದು ಕೊನೆಯಲ್ಲಿ ಸಹಿ ಹಾಕುವಾಗ ತನ್ನ ಹೆಸರನ್ನ ಬರೆಯದೇ “ನಬಿ ಮಾಲಿಕ್ ಎಂಬುದನ್ನಷ್ಟೇ ಬರೆದು ಕೊಟ್ಟ. ಬುದ್ದಿ ತಿಳಿದು ಅಧಿಕಾರ ಹಿಡಿದಾಗಿನಿಂದ ಆತ ಅದೇ ರೀತಿಯ ರುಜು ಹಾಕುತ್ತಿದ್ದ. ಅದೆಲ್ಲವೂ ಮುಗಿದು ಆಂಗ್ಲ ಅಧಿಕಾರಿ ಎದ್ದು ನಿಲ್ಲುವ ಹೊತ್ತಿಗೆ ಈರ್ವರು ರಾಜಕುಮಾರರು ಭವ್ಯ ಪೋಷಾಕು ಧರಿಸಿ, ತಲೆಯ ಮೇಲೆ ಮಿಂಚುವ ಕೆಂಪು ಪೇಟಾ, ಹೊಳೆಯುವ ಮುತ್ತಿನ ಸರಗಳೊಂದಿಗೆ ಸುಲ್ತಾನನ ಮುಂದೆ ಬಂದು ನಿಂತರು. ಅವರ ಬೀಳ್ಕೊಡುಗೆಯಾರ್ಥ ಇಪ್ಪತ್ತೊಂದು ಬಂದೂಕಿನ ಸಲಾಂಗಳಾದವು.
ಅತ್ತು ಮದ್ದು ಸುಟ್ಟ ಸದ್ದುಗಳಾಗುತ್ತಿದ್ದರೆ ಇತ್ತ ಅಷ್ಟೊತ್ತಿನವರೆಗೆ ಅಲುಗದೇ ಕಲ್ಲುಬಂಡೆಯಂತೆ ನಿಂತಿದ್ದ ಟಿಪ್ಪು ಮಕ್ಕಳ ಮುಖಗಳನ್ನ ನೋಡುತ್ತಲೇ ಅಧೀರನಾಗಿ ಹೋದ. ಕಣ್ಣಂಚು ಒದ್ದೆಯಾಯಿತು. ಆತ ನೂರು ಕೋಸುಗಳಿಗೆ ಒಡೆಯನಾಗಿರಬಹುದು. ಸಾವಿರದಿಪ್ಪತ್ತು ಜಾಹೀರು ದಾನ ಮಾಡಿರಬಹುದು, ಹತ್ತು ಯುದ್ದ ಆರು ಗೆಲುವು, ನೂರಾರು ಊರುಗಳನ್ನ ವಶಪಡಿಸಿಕೊಂಡ ವೀರ ಸೇನಾನಿ ಸುಲ್ತಾನ್ ಸಾಹೇಬನೇ ಇರಬಹುದು… ಆದರೆ ಆತನೂ ಒಬ್ಬ ತಂದೆ. ಎಲ್ಲಾ ತಂದೆಯಂತೆಯೇ ಆತನೂ ಕಡು ದುಃಖಿಯಾದ. ಇಬ್ಬರೂ ಮಕ್ಕಳನ್ನ ಬರಸೆಳೆದು ಗಟ್ಟಿಯಾಗಿ ತಬ್ಬಿಕೊಂಡು ಕೊನೆಗೊಂದು ಸಲ ಈರ್ವರ ಹಣೆಗೆ ಮುತ್ತಿಟ್ಟು “ಈ ಮೈಸೂರು ಸಾಮ್ರಾಜ್ಯ ನಿಮ್ಮನ್ನು ಬೀದಿಗೆ ಚೆಲ್ಲಿತು ಎಂದೂ ಭಾವಿಸಬೇಡಿ ಮಕ್ಕಳೇ” ಎಂದು ಉದ್ಗರಿಸುತ್ತ, “ಖುದಾ ಹಫೀಜ್ ಅಂತ ಒಲುಮೆಯಿಂದ ಹೇಳಿದ.
ಆತನ ಕಣ್ಣಲ್ಲಿ ನೀರು ಸಣ್ಣ ಝರಿಯಾಗಿ ಕಪಾಳ ತೋಯಿಸುತ್ತ ಕ್ಷಣಾರ್ಧದಲ್ಲಿ ಮಾಯವಾಗುತ್ತಿತ್ತು…

~ಶರಣಬಸವ ಕೆ. ಗುಡದಿನ್ನಿ

Leave a Reply

Your email address will not be published. Required fields are marked *