ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ IIT ಬಾಂಬೆಯಲ್ಲಿ, 18 ವರ್ಷದ ದರ್ಶನ್ ಸೋಲಂಕಿ ಎನ್ನುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯು ಭಾರತದ ಶಿಕ್ಷಣ ಸಂಸ್ಥೆಗಳು ಇಂದಿಗೂ ಹೇಗೆ ಅಗ್ರಹಾರಗಳಾಗಿ ಉಳಿದುಕೊಂಡು ಜಾತಿ ತಾರತಮ್ಯವನ್ನು ಪೋಷಿಸುತ್ತಿವೆ ಎಂಬ ಆಘಾತಕಾರಿ ಸತ್ಯವನ್ನು ಮತ್ತೆ ಹೊರಹಾಕಿದೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದ ಸಮುದಾಯಗಳು ಸ್ವಾತಂತ್ರದ ನಂತರವಷ್ಟೆ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಪಡೆದವು. ಅದರಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸೇರುವ ಆಸೆಯನ್ನು ಇತ್ತೀಚೆಗೆ ಅಷ್ಟೇ ಪೂರೈಸಿಕೊಳ್ಳುವತ್ತ ದಾಪುಗಾಲು ಹಾಕುತಿದ್ದಾರೆ. ಆದರೆ ಇದನ್ನು ಸಹಿಸದ ಜಾತಿ ಭಯೋತ್ಪಾದಕರು ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು Death Trap ಗಳನ್ನಾಗಿ ಪರಿವರ್ತಿಸಿ ದೇಶದ ಭವಿಷ್ಯಕ್ಕೆ ಕೊಳ್ಳಿ ಇಡುತಿದ್ದಾರೆ.
ರೋಹಿತ್ ವೇಮುಲ ಮತ್ತು ಡಾ.ಪಾಯಲ್ ತಡವಿಯ ಆತ್ಮಹತ್ಯೆಯ ಘಟನೆಗಳು ಇಡಿ ಭಾರತವನ್ನು ತಲ್ಲಣಗೊಳಿಸಿ ವಿಶ್ವಮಟ್ಟದಲ್ಲಿ ಭಾರತವು ತಲೆತಗ್ಗಿಸುವಂತೆ ಮಾಡಿತ್ತು. ಈ ಘಟನೆಗಳ ನಂತರ ಈ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಭಯೋತ್ಪಾದನೆಯು ಕೊನೆಗೊಳ್ಳಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವಂತಹ ಜಾತಿ ಪ್ರವೇರಿತ ಅಪರಾಧಗಳನ್ನು ನೋಡುತ್ತಿದ್ದರೆ ಇದು ಯಾವುದೇ ಕಾರಣಕ್ಕೂ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ಸಾಕಷ್ಟು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಶ್ರಮವಹಿಸಿ ಎಲ್ಲರಂತೆ ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಎದುರಿಸಿ ಜೊತೆಗೆ ಪ್ರವೇಶ ಪರೀಕ್ಷೆಗಳನ್ನು ಎದುರಿಸಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಆಯ್ಕೆಯಾಗುವ ಈ ಶೋಷಿತ ಸಮುದಾಯಗಳು, ಆಯ್ಕೆ ಪ್ರಕ್ರಿಯೆಯಿಂದ ಶುರುವಾಗುವ ಶೋಷಣೆಯನ್ನು ತಾವು ವಿದ್ಯಾರ್ಥಿಯಾಗಿ ಆ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಪ್ರತಿದಿನವೂ ವಿವಿಧ ರೀತಿಯ ಜಾತಿ ತಾರತಮ್ಯವನ್ನು ತಮ್ಮ ಸಹಪಾಠಿಗಳು ಹಾಗೂ ಆ ಸಂಸ್ಥೆಗಳ ಬೋಧಕ, ಬೋಧಕೇತರ ವರ್ಗದವರಿಂದಲೂ ಎದುರಿಸಬೇಕಾಗುತ್ತದೆ. ತಾಮಗೆ ಪಾಠ ಕಲಿಸಬೇಕಾದ ಕ್ಲಾಸ್ ರೂಮ್ ಗಳು ಡೆತ್ ರೂಮ್ ಗಳಾಗಿ ಪ್ರತಿಕ್ಷಣವು ಕಾಡುತ್ತವೆ. ತಮ್ಮ ಸಹಪಾಠಿಗಳೇ ಜಾತಿ ಭಯೋತ್ಪಾದಕರಾಗಿ ಪ್ರತಿಕ್ಷಣ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡತೊಡಗುತ್ತಾರೆ!
ಉತ್ತರ ಪ್ರದೇಶದ ಬಾಲ್ ಮುಕುಂದ್ ಎನ್ನುವ ದಲಿತ ವಿದ್ಯಾರ್ಥಿಯು ದೆಹಲಿಯ AIIMSನಲ್ಲಿ ವಿದ್ಯಾಭ್ಯಾಸ ಮಾಡುತ್ತಿರಲು, ಅಲ್ಲಿನ ಜಾತಿ ಭಯೋತ್ಪಾದಕ ವಿದ್ಯಾರ್ಥಿಗಳು ತನ್ನನ್ನು “ಏ ಚಮ್ಮಾರ್, ನೀನು ಯಾಕೋ ಡಾಕ್ಟರ್ ಆಗಬೇಕು? ಮೀಸಲಾತಿಯಿಂದ ಸೀಟು ಪಡೆದು ನೀವು ಡಾಕ್ಟರ್ ಆಗಲು ಬರುತ್ತೀರ?” ಎಂದು ಪ್ರತಿನಿತ್ಯ ಚುಡಾಯಿಸುತ್ತಿದ್ದರು ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. ಚಂಡಿಗಡದ ಸರ್ಕಾರಿ ವೈದ್ಯಕೀಯ ಕಾಲೇಜಿನ ಜಸ್ಪ್ರೀತ್ ಸಿಂಗ್ ಎನ್ನುವ ವಿದ್ಯಾರ್ಥಿಯು ತನ್ನ ಸಹಪಾಠಿಗಳ ಜಾತಿ ಭಯೋತ್ಪಾದನೆಗೆ ರೋಸಿಹೋಗಿ ತನ್ನ ಕಾಲೇಜಿನ ಗ್ರಂಥಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ನಮ್ಮ ಮುಂದೆ ಇದೆ. ರೂರ್ಕಿಯ IITಯ ಮನಿಷ್ ಕುಮಾರ್ ಎಂಬ ದಲಿತ ವಿದ್ಯಾರ್ಥಿ ತನ್ನ ಸಹಪಾಠಿ ಭಯೋತ್ಪಾದಕರು ತನಗೆ ನೀಡುತ್ತಿರುವ ಹಿಂಸೆಯ ಬಗ್ಗೆ ಬಹಳಷ್ಟು ಸಲ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೆ ಕ್ರಮವನ್ನು ತೆಗೆದುಕೊಳ್ಳದ ಪರಿಣಾಮ, ಸಂಸ್ಥೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆಯು ನಡೆದಿದೆ! IIT ಕರ್ಗಾಪುರ್ ದ ಸೀಮಾ ಸಿಂಗ್ ಎನ್ನುವ ಜಾತಿ ಭಯೋತ್ಪಾದಕಿ ಪ್ರೊಫೆಸರ್ ಪ್ರತಿನಿತ್ಯ ತನ್ನ ದಲಿತ ವಿದ್ಯಾರ್ಥಿಗಳನ್ನು “Bloody Bastards” ಎಂದು ಬೈಯುತ್ತಿದ್ದನ್ನು ವಿದ್ಯಾರ್ಥಿಗಳು ಬಹಿರಂಗಗೊಳಿಸಿದ್ದರು. IIT ಮದರಾಸಿನ ಅಸೋಸಿಯೇಟ್ ಪ್ರೊಫೆಸರ್ ವಿಪಿನ್ ಪುದಿಯಾತ್ ವೀಟಿಲ್ ತನ್ನ ಸಹೋದ್ಯೋಗಿಗಳ ಜಾತಿ ಭಯೋತ್ಪಾದನೆಗೆ ಬೇಸತ್ತು ತನ್ನ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ಜಮ್ಮು ವಿಶ್ವವಿದ್ಯಾಲಯದ ಪ್ರಖ್ಯಾತ ಅಸೋಸಿಯೇಟ್ ಪ್ರೊಫೆಸರ್ ಡಾ.ಚಂದ್ರಶೇಖರ್ ಅವರು ತಮ್ಮ ಸಹೋದ್ಯೋಗಿಗಳ ಜಾತಿ ಭಯೋತ್ಪಾದನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಹೇಳುತ್ತಾ ಹೋದರೆ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ! ಹೀಗೆ, ಈ ಜಾತಿ ಭಯೋತ್ಪಾದನೆಯು ಅನೇಕ ಪ್ರತಿಭಾವಂತ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ.
ಈ ಕೃತ್ಯಗಳಿಗೆ ಕಾರಣ ಕೇವಲ ಜನರ ಜಾತಿಯತೆ ಎನ್ನುವ ಮಾನಸಿಕ ಕಾಯಿಲೆ ಮಾತ್ರವಲ್ಲ ಸರ್ಕಾರದ ನೀತಿಗಳು ಕೂಡ. 2019ರಲ್ಲಿ ಕೇಂದ್ರ ಶಿಕ್ಷಣ ಮಂತ್ರಾಲಯವು ಲೋಕಸಭೆಯಲ್ಲಿ ಕೊಟ್ಟ ಹೇಳಿಕೆಯ ಪ್ರಕಾರ ದೇಶದ 23 IITಗಳ ಒಟ್ಟು 6043 ಸಿಬ್ಬಂದಿಗಳ ಪೈಕಿ ಕೇವಲ 149 SC ಹಾಗು 21 ST ಸಿಬ್ಬಂದಿಗಳಿದ್ದಾರೆ ಮತ್ತು ದೇಶದ 13 IIM ಗಳ 642 ಸಿಬ್ಬಂದಿಗಳ ಪೈಕಿ ಕೇವಲ 4 SC ಹಾಗು 1 ST ಸಿಬ್ಬಂದಿಗಳಿದ್ದರೆ ಹಾಗೆಯೆ ದೆಹಲಿ ವಿಶ್ವವಿದ್ಯಾಲಯದ ಒಟ್ಟು 264 ಸಿಬ್ಬಂದಿಗಳ ಪೈಕಿ ಕೇವಲ 3 SC. ಪ್ರೊಫೆಸರ್ ಗಳು ಹಾಗು 0 ST. ಇದು ಎಪ್ಪತ್ತೈದು ವರ್ಷಗಳ ಸ್ವತಂತ್ರ ಭಾರತದ ಸ್ಥಿತಿ. ಇಂತಹ ಮಡಿವಂತಿಕೆ ತುಂಬಿರುವ ಅಗ್ರಹಾರ ಗುರುಕುಲಗಳಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಇಂತಹ ಜಾತಿ ರೋಗಿಷ್ಠ ವ್ಯವಸ್ಥೆಯು ಭಾರತವನ್ನು ವಿಶ್ವಗುರು ಮಾಡ ಬಲ್ಲದೆ? ಅಂದು ಆ ಜಾತಿವಾದಿ ದ್ರೋಣಾಚಾರ್ಯ ಶೂದ್ರ ಏಕಲವ್ಯನ ಪ್ರತಿಭೆಯನ್ನು ಕೊಂದರೆ ಇಂದು ಈ ಜಾತಿ ಭಯೋತ್ಪಾದಕರು ಏಕಲವ್ಯರನ್ನೆ ಕೊಲ್ಲುತಿದ್ದಾರೆ! ಈ ಸಾಂಸ್ಥಿಕ ಕೊಲೆಗಳು ನಿಲ್ಲುವುದು ಯಾವಾಗ?