ಈ ಸಮಾಜಕ್ಕೆ ಈಗಿನ ಸಂದರ್ಭದಲ್ಲಿ ಒಬ್ಬ ಅತ್ಯುತ್ತಮ ಚಿಕಿತ್ಸಕ ಬೇಕಾಗಿದ್ದಾನೆ ಅಥವಾ ಬೇಕಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಳ್ಳೆಯ ಗುರು ಅಥವಾ ಶಿಕ್ಷಕ ಸಿಕ್ಕಿದ್ದರೆ ಸಾಕಿತ್ತು ಹಲವಾರು ಉದ್ದಾರಕ ಗುಣಗಳು ಮನುಷ್ಯನೆದೆಯಲ್ಲಿ ಹುಟ್ಟಿ ಈ ಸಮಾಜವನ್ನು ಪರಿವರ್ತಿಸುವ ಶಕ್ತಿ ಪಡೆಯುತ್ತಿದ್ದವು.
ಚಾಣಕ್ಯನ ಕಾಲದಲ್ಲಿ ಶತ್ರು ರಾಜರನ್ನು ಹಣಿಯಲು ಮೋಸದಿಂದ ಅವರ ರಾಜ್ಯವನ್ನು ಗೆಲ್ಲಲು ವಿಷ ಕನ್ಯೆಯರನ್ನು ಎಲ್ಲಾ ರಾಜರು ಸಾಕುತ್ತಿದ್ದರಂತೆ. ಈ ವಿಷಕನ್ಯೆ ಎಂಬ ಅಸ್ತ್ರ ಆಗಿಂದಾಗಲೇ ಸೃಷ್ಟಿಯಾಗುತ್ತಿರಲಿಲ್ಲ ಜನ್ಮ ಪಡೆದ ಕ್ಷಣದಿಂದ ವಿಷಕನ್ಯೆಯನ್ನಾಗಿಸುವ ತೀರ್ಮಾನಕ್ಕೆ ಒಳಗಾದ ಹೆಣ್ಣು ಮಗುವನ್ನು ಹಾಲಿನ ಜೊತೆಗೆ ಅಥವಾ ಹಾಲಿಲ್ಲದೇ ಹಾಲಾಹಲವನ್ನು ಅಂದರೆ ವಿಷವನ್ನು ಕುಡಿಸುತ್ತಾ ಬೆಳೆಸುತ್ತಿದ್ದರಂತೆ. ಆ ಹೆಣ್ಣು ಪ್ರಾಪ್ತ ವಯಸ್ಸಿಗೆ ಬರುವಷ್ಟರಲ್ಲಿ ಆ ವಿಷವೆಂಬುದು ಸಹಜ ಆಹಾರವಾಗುತ್ತಿತ್ತೆಂದು ಹೇಳಲಾಗುತ್ತದೆ. ಇದರಲ್ಲಿ ತರ್ಕ ಕುತರ್ಕ ಅಥವಾ ಸಾಧ್ಯಾಸಾಧ್ಯತೆಗಳ ವಾದಗಳು ಪಕ್ಕಕ್ಕಿಟ್ಟು, ಆ ಪರಿಕಲ್ಪನೆಯನ್ನು ನೋಡುವುದಾದರೆ; ಮನುಷ್ಯ ತಾನು ಬದುಕಬೇಕು ಅಮೋಘವಾದ ಅರಸೊತ್ತಿಗೆಯ ಅಧಿಕಾರವನ್ನು ಅನುಭವಿಸಬೇಕು ಎಂಬ ಲಾಲಸೆಯಿಂದ ತನ್ನಡಿಯಾಳುಗಳಾದ ಮನುಷ್ಯರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದ ಪ್ರಾಣಿಗಳನ್ನಷ್ಟೇ ಅಲ್ಲದೇ ಮನುಷ್ಯರನ್ನೂ ಸಹ ಪಳಗಿಸಿ ತನ್ನ ಧೂರ್ತತನವನ್ನು ಮೆರೆಯುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ.

ಸಾಂದರ್ಭಿಕ ಚಿತ್ರ

ಅಧಿಕಾರವೆಂಬುದು ಒಂದು ತೆರನಾದ ಅಮಲು ಮದಿರೆಗೆಂತ ಜೂಜಾಟಕ್ಕಿಂತ ಹೆಣ್ಣಿನ ಸಂಗಕ್ಕಿಂತ ಹೆಚ್ಚಾ ಮತ್ತು ಬರಿಸುವಂತಹ ಪದಾರ್ಥವದು. ಈ ಅಧಿಕಾರವೆಂಬುದು ಯಾವುದೇ ತೆರನಾದದ್ದಾರೂ ಸರಿಯೇ ಒಟ್ಟಾರೆ ಆ ಅಧಿಕಾರದಿಂದ ಹಲವು ಜನರನ್ನು ಅಥವಾ ಸಮುದಾಯವನ್ನು ಮತ್ತಲ್ಲದೇ ಈ ಸಮಾಜದ ಒಂದು ಪದರವನ್ನು ಆಳುವಂತಹ ಶಾಸಿಸಿ ತನ್ನ ಅಂಕೆಯಲ್ಲಿಟ್ಟುಕೊಳ್ಳುವಂತಿರಬೇಕು. ಅದು ಒಮ್ಮೆ ಮೈ ಬಳಸಿ ಮೆದುಳಿಗೆ ಕೈ ಹಾಕಿ ತನ್ನ ಛಾಪನ್ನು ಮೂಡಿಸಿತೆಂದರೆ ಮುಗಿಯಿತು, ಉಸಿರಿರುವವರೆಗೂ ಸಾಧಾರಣ ಬದುಕನ್ನು ಬದುಕಲು ಬಿಡುವುದಿಲ್ಲ. ಜೀವನವೆಂಬುದುನ್ನು ತ್ರಿಶಂಕು ಸ್ಥಿತಿಗೊಯ್ದು ತೂಗುಯ್ಯಾಲೆ ಆಡಿಸದೇ ಬಿಡದು. ಆ ಅಧಿಕಾರದ ಮದವನ್ನು ಮರೆಯಲಾಗದೇ ಮತ್ತೆ ಮತ್ತೆ ಬೇಕೆಂಬ ಹಪಾಹಪಿತನಕ್ಕೆ ಬಿದ್ದು ಸಮಾಜದ ಮುಖದ ಮೇಲೆ ಮಾಯಲಾರದ ಗಾಯಗಳನ್ನು ಮಾಡಿ ಸಮಾಜದ ಹೃದಯದಲ್ಲಿ ಕೀವು ತುಂಬುವ ವ್ರಣವಾಗಿ ಕಾಡದೇ ಇರಲಾರರು. ಅಧಿಕಾರ ಪಡೆಯಬೇಕೆಂಬ ಉಮೇದಿಗೆ ಬಿದ್ದು ತಾವೆಲ್ಲರೂ ಸತ್ಯ ಹರಿಶ್ಚಂದ್ರನ ಅಂಶದಿಂದ ಹುಟ್ಟಿದವರೆಂದು ಸುಳ್ಳು ಸುಳ್ಳೇ ಗುಳ್ಳೆ ನರಿಗಳಂತೆ ನಕ್ಕು ಸಮಾಜವನ್ನು ನಂಬಿಸುವ ಕಾಯಕ ಮಾಡುತ್ತಲೇ ಇರುತ್ತಾರೆ.

ಈಗ ವಿಷ ಕನ್ಯೆಯರ ಕಾಲ ಮುಗಿದಿದೆ ಒಂದು ಈಗೇನಾದರೂ ಆ ವಿಷ ಕನ್ಯೆಯರು ಬಂದು ನಿಂತರೆ ಈ ಗುಳ್ಳೆ ನರಿಗಳ ನೋಟಕ್ಕೆ ನಿರ್ನಾಮವಾಗುತ್ತಾರೆ. ಆಗಿನ ಕಾಲದಲ್ಲಿ ವಿಷಕನ್ಯೆಯರ ಪರಿಕಲ್ಪನೆ ಅಥವಾ ವಿಷವನ್ನುಣಿಸುವ ಪರಿಕಲ್ಪನೆಯು ತನ್ನ ಜನರ ಉಳಿವಿಗಾಗಿ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಮಾತ್ರ ಪ್ರಯೋಗುಸಲ್ಪಡುತ್ತಿತ್ತೇ ಹೊರತು ತನ್ನನ್ನು ನಂಬಿದವರ ಸುರಕ್ಷಿತೆಗಾಗಿ ಬಳಸಲ್ಪಡುತ್ತಿತ್ತೇ ಹೊರತು ಸುಖಾಸುಮ್ಕನೇ ಯಾರ ಮೇಲೂ ಪ್ರಯೋಗಿಸುತ್ತಿರಲಿಲ್ಲ. ಈಗಿನ ಕಾಲಘಟ್ಟದಲ್ಲಿ ಚಂಚಲತೆಗೊಳಗಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರನ್ನು ಸರಿದಾರಿಗೆ ತರುವಲ್ಲಿ ಈ ಸಮಾಜದಲ್ಲಿನ ಎಲ್ಲಾ ಸಂಸ್ಥೆಗಳು ಸೋತಿವೆ. ಬಹು ಮುಖ್ಯವಾಗಿ ಕೌಟುಂಬಿಕ ವ್ಯವಸ್ಥೆಯ ಸಂಸ್ಥೆಯು ಹದಗೆಟ್ಟು ಹಾದಿ ತಪ್ಪಿದೆ. ಯಾವ ದೇಶದಲ್ಲಿ ಸ್ವಸ್ಥ ಸಮಾಜವನ್ನು ಕಟ್ಟಲು ಭದ್ರವಾದ ಮೌಲ್ಯಗಳನ್ನು ರೂಪಿಸಲು ಶ್ರಮಿಸಿ, ಭವ್ಯವಾದ ಪಾರಂಪರಿಕ ಸಾಂಸ್ಕೃತಿಕ ಸಂಪ್ರದಾಯ ಮತ್ತು ಸಮಾಜದ ಮುನ್ನಡೆಗೆ ಕೊಡುಗೆ ನೀಡಿ ಅನುಕರಣೀಯವಾಗಿತ್ತೋ ಅಂತಹ ಕೌಟುಂಬಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಕೌಟುಂಬಿಕ ವ್ಯವಸ್ಥೆ ಕುಸಿತವೇ ಇತರೆಲ್ಲಾ ಸಂಸ್ತೆಗಳ ಅಧೋಗತಿಗೆ ಕಾರಣವಾಗಿ ಸಮಾಜದ ಅವನತಿಗೆ ಮೂಲವಾಗಿದೆ.
ಇದರ ಲಾಭ ಪಡೆದವರು ಕೆಲವರು ಸೋಗಲಾಡಿತನದ ಶೋಕಿಗೆ ಒಳಗಾಗಿ ಬದುಕನ್ನು ಮೂರಾಬಟ್ಟೆ ಮಾಡಿಕೊಂಡವರು ಹಲವರು. ಎಂತಹ ಭ್ರಮೆಯ ಬಲೆಯನ್ನು ಹೆಣೆದಿರುವರೆಂದರೆ ಬಲೆಯಾಚೆಗೆ ಕಾಣುವುದೂ ಸಹ ಮನಮೋಹಕವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಭ್ರಮಾಲೋಕದ ಬಲಿಪಶುಗಳಾಗಿ ತೇಲಾಡುತ್ತಿರುವವರಿಗೆ ಕಿವಿ‌ಹಿಂಡಿ ಬಿಸಿ ಮುಟ್ಟಿಸುವವರಾರು!? ಮಲಿನಗೊಂಡಿಹ ಮನಸುಗಳು ಚಿಟಿಕೆ ಹೊಡೆವಷ್ಟರಲ್ಲಿ ಸೃಷ್ಟಿಯಾದವುಗಳಲ್ಲ. ಹಲವಾರು ವರ್ಷಗಳ ನಿರಂತರ ಕಾಯಕಲ್ಪ ಮಾಡಿರಲೂಬಹುದು. ವಿಷ ಕನ್ಯೆಯರ ಬಗ್ಗೆ ಹೇಳಿದಂತೆ ಆಗ ವಿಷ ಕನ್ಯೆಯರು ಕೇವಲ ಅನಿವಾರ್ಯ ಸಂದರ್ಭದಲ್ಲಿ ಬಳಸಲ್ಪಡುತ್ತಿದ್ದರು, ಅವರನ್ನು ನಿರ್ಧಿಷ್ಟವಾದ ಉದ್ದೇಶಕ್ಕಾಗಿ ತಯಾರು ಮಾಡಲಾಗುತ್ತಿತ್ತು. ಆ ನಿರ್ಧಿಷ್ಟ ಉದ್ದೇಶವೂ ಸಹ ಸಮಾಜಮುಖಿಯಾಗಿರುತ್ತಿತ್ತು. ಪ್ರಜೆಗಳ ಉನ್ನತಿ ಮತ್ತು ಏಳ್ಗೆಯ ಪಥದತ್ತ ಕೊಂಡೊಯ್ಯುವಂತಿತ್ತು. ಆದರೆ ಈಗ ಮೈ ವಿಷವಾದರೆ ಸುಟ್ಟು ಮಣ್ಣಲ್ಲಿ ಬೆರೆಸಬಹುದು ಏಕೆಂದರೆ ಮಣ್ಣಿನ ಗುಣವೇ ಸಕಲ ಕಲ್ಮಷವನ್ನೂ ಜೀರ್ಣಿಸಿಕೊಂಡು ತನ್ನನ್ನು ನಂಬಿದವರಿಗೆ ಜೀವರಸ ನೀಡುವುದು.
ಆದರೆ ಈಗ ಮೈ ಮಾತ್ರ ವಿಷಮಯವಾಗಿಲ್ಲ ಇಡೀ ಸಮಾಜದ ಕೆಲ ವರ್ಗದವರ ಮನಸು- ಆಲೋಚನೆ- ಚಿಂತನೆ ಗಳು ಮತ್ತು ಆ ಆಲೋಚನೆ ಚಿಂತನೆಗಳಿಂದ ರೂಪುಗೊಳ್ಳುವ ಯೋಜನೆಗಳೂ ಕೂಡಾ ವಿಷದ ಲೇಪನವನ್ನೇ ಹೊದ್ದು ಸ್ಪೋಟಗೊಳ್ಳುತ್ತವೆ. ನೀಟಾದ ಗರಿಗರಿ ಬಟ್ಟೆಗಳಿಂದ ಆವೃತವಾಗಿ ನಗುಮೊಗದಿಂದ ನಮ್ಮ ನಡುವೆಯೇ ನಿಂತಿರುತ್ತವೆ ಆ ಮಲಿನ ಮನಸುಗಳು ಆದರೆ ಆ ನಗುಮೊಗದ ಹಿಂದಿನಿಂದ ಸಿಡಿಯುವ ವಿಷಮಯ ಬಾಂಬುಗಳು ಎಲ್ಲವನ್ನೂ ಕ್ಷಣಾರ್ಧದಲ್ಲಿ ಆಪೋಶನಗೈದು ಮನುಷ್ಯರನ್ನು ಜೀವಶ್ಚವವಾಗಿಸಿ ಉಸಿರಿರುವವರೆಗೂ ಗುಲಾಮಿತನದ ಸರಪಳಿಯಲ್ಲಿ ಬಂಧಿಸಿ ತನ್ನ ಪಾದದಡಿಯಲ್ಲಿ ಬಿದ್ದಿರುವಂತೆ ಮಾಡಲಾಗುತ್ತದೆ.
ವಿಷಮಯ ಮನಸುಗಳು ಎಲ್ಲೆಲ್ಲಿಯೂ ಇರಬಹುದು ಎಲ್ಲರಲ್ಲಿಯೂ ಕಾಣಬಹುದು ಮುಖ್ಯವಾಗಿ ಈಗ ಚುನಾವಣೆಗಳು ಬರುತ್ತಿವೆ ಎಲ್ಲವೂ ಗರಿಗೆದರಿ ರಣಹದ್ದುಗಳಂತೆ ಹಾರಿ ಬರುತ್ತವೆ. ಬೇಸಿಗೆಯ ಬಿಸಿ ತಾಳದೇ ಹೊರಬರುವ ನಾಗರಗಳಂತೆ ಚುನಾವಣೆಯ ಬಿಸಿ ತಾಪಕ್ಕೆ ಬೆದರಿ ಸಮಾಜವನ್ನು ಅಲ್ಲೋಕಲ್ಲೋಲಗೊಳಿಸಲು ಘಟ ಸರ್ಪಗಳು ದಾಂಗುಡಿಯಿಡುತ್ತವೆ ಎಚ್ಚರ ಜನರೇ ಎಚ್ಚರ ಆ ಮಿಥ್ಯದ ನಾಗರಗಳ ಬುಸುಗುಡುವಿಕೆಗೆ ಕಂಗೆಡದಿರಿ, ಅಸತ್ಯದ ಆವಾಸಸ್ಥಾನದಿಂದ ಬರುವ ಅವುಗಳಿಗೆ ಅಲ್ಪಾಯುತನವಿದೆ. ಪುರಾಣಗಳಲ್ಲಿ ವರ ಪಡೆದ ರಕ್ಕಸರು ಬರಗೆಟ್ಟು ಅಧಿಕಾರದ ಲಾಲಸೆಯಿಂದ ಎಲ್ಲೆಂದರಲ್ಲಿ ಮುಗಿಬಿದ್ದು ದಾಂಧಲೆ ಮಾಡುತ್ತಿದ್ದ ಪ್ರಹಸನಗಳನ್ನು ಎಲ್ಲರೂ ಕೇಳಿ ನೋಡಿ‌ ಬಲ್ಲೆವು ಆದ್ದರಿಂದ ವಿವೇಕ ಮತ್ತು ವಿವೇಚನೆಯ ಅಸ್ತ್ರಗಳಿಂದ ಹಾದಿ ತಪ್ಪಿ ಕುಣಿಯುವ ಮತ್ತೇರಿ ಮೆರೆಯುವ ಈ ವಿಷ ಮನಸುಗಳಿಗೆ ಸೂಕ್ತ ಚಿಕಿತ್ಸಕನೆಂದರೆ‌ ಅದು ಸಾಮಾನ್ಯ ಪ್ರಜೆ , ಆ ಸಾಮಾನ್ಯ ಪ್ರಜೆ ಪ್ರಜ್ಞಾವಂತಿಕೆಯ ಅಸ್ತ್ರವನ್ನು ಬಳಸುವನೇ, ತನ್ನನ್ನಾಳುವ ನಾಯಕನೆಂಬ ಭ್ರಮೆಯಿದ ಹೊರಬಂದು ತನ್ನ ಬಿಡುವಿಲ್ಲದ ಈ ಬದುಕಿನಲ್ಲಿ ತನಗೆ ಮತ್ತು ತನ್ನ ಜನರಿಗೆ ಬೇಕಾದ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡುವ ಒಬ್ಬ ಕೆಲಸಗಾರನೆಂಬ ಸತ್ಯವನ್ನು ತಿಳಿದು ಅದರಂತೆ ಪ್ರವರ್ತಿಸಬಲ್ಲನೇ, ಕಾದು ನೋಡೋಣ!?
ಆಧುನಿಕ ಬದುಕಿನ ವೇಗಕ್ಕೆ ಸಿಲುಕಿದ ಮನುಷ್ಯ ವಿವೇಚನಾರಹಿತನಾಗಿ ವಿವೇಕಹೀನನಾಗಿದ್ದಾನೆ ಹಣವಿದ್ದರೆ ಸಾಕು ಎಲ್ಲವನ್ನೂ ಗಳಿಸಬಲ್ಲೆ ಎಂಬ ಹುಂಬತನದಲ್ಲಿ ಯಾವ ಬಂಧಗಳೂ ಬೇಡ ಎಂದು ಮುನ್ನುಗ್ಗುತ್ತಿರುವ ಈ ಸಮಾಜಕ್ಕೆ ಲಗಾಮು ಬೇಕಿದೆ .
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
೯೮೪೪೬-೭೩೯೭೬

Leave a Reply

Your email address will not be published. Required fields are marked *