ಮೀಸಲಾತಿಯು ಪ್ರತಿ ಶೋಷಿತ ಸಮುದಾಯದ ಮೂಲಭೂತ ಹಕ್ಕು. ಆದರೆ ಇಂದು ಅದನ್ನು ಬಲಿಷ್ಠರು ತಮಗೆ ಇಚ್ಛೆ ಬಂದ ಹಾಗೆ ದುರುಪಯೋಗ ಪಡಿಸಿಕೊಳ್ಳುವದನ್ನು ನೋಡಿದರೆ ಅಸಹ್ಯ ವಾಗುತ್ತದೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಜಾತಿ ಆಧಾರಿತ ಮೀಸಲಾತಿಯು ಜಾರಿಯಲ್ಲಿತ್ತು. ಅದರಲ್ಲೂ ಕ್ರಿ ಪೂ 185ರಲ್ಲಿ ಮನುಸ್ಮೃತಿ ಎಂಬ ವೈದಿಕ ಕಾನೂನಿನ ಮುಖಾಂತರ ಅದಕ್ಕೆ ದೈವ ಮತ್ತು ರಾಜನ ಮನ್ನಣೆಯು ಸಿಕ್ಕಿತು. ಇದರ ಪರಿಣಾಮವಾಗಿ ಶಿಕ್ಷಣವು ಬ್ರಾಹ್ಮಣರ ಹಕ್ಕಾಗಿ, ಅಧಿಕಾರವು ಕ್ಷತ್ರಿಯರ ಹಕ್ಕಾಗಿ, ಆಸ್ತಿಯು ವೈಶ್ಯರ ಹಕ್ಕಾಗಿ, ಸೇವೆಯು ಶೂದ್ರರ ಹಕ್ಕಾಗಿ ಪರಿಣಮಿಸಿ ದೇಶವು ದಟ್ಟ ದಾರಿದ್ರ್ಯಕ್ಕೆ ತುತ್ತಾಯಿತು. ಸಾವಿರಾರು ವರ್ಷಗಳ ಈ ಜಾತಿ ಆಧಾರಿತ ಮೀಸಲಾತಿಯ ವಿರುದ್ಧವಾಗಿ, ಮೊಟ್ಟಮೊದಲಬಾರಿಗೆ ಮಹಾರಾಷ್ಟ್ರದ ಕೊಲ್ಹಾಪುರದ ಸಂಸ್ಥಾನದ ದೊರೆ ಶ್ರೀ ಛತ್ರಪತಿ ಶಾಹು ಮಹರಾಜರು ಪ್ರಾತಿನಿಧ್ಯ ಆಧಾರಿತ ಮೀಸಲಾತಿಯನ್ನು, 1902ನೇ ಇಸವಿಯಲ್ಲಿ ಜಾರಿ ಮಾಡಿ, ಅಬ್ರಾಹ್ಮಣರಿಗೆ ಉದ್ಯೋಗದಲ್ಲಿ ಶೇ 50% ಮೀಸಲಾತಿಯನ್ನು ನೀಡಿದರು.
ನಂತರ ಇವರಿಂದ ಪ್ರೇರಿತರಾಗಿ ಮೈಸೂರು ಸಂಸ್ಥಾನದ ದೊರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1921ರಲ್ಲಿ ಅಬ್ರಾಹ್ಮಣರಿಗೆ ಉದ್ಯೋಗದಲ್ಲಿ ಶೇ 75ರಷ್ಟು ಮೀಸಲಾತಿಯನ್ನು ಜಾರಿ ಮಾಡಿದರು. ಆದರೆ ಕೊಲ್ಲಾಪುರದಲ್ಲಿ ಬ್ರಾಹ್ಮಣರಾದ ಬಾಲಗಂಗಾಧರ ತಿಲಕರು ಮತ್ತು ಮೈಸೂರಿನಲ್ಲಿ ಬ್ರಾಹ್ಮಣರಾದ ವಿಶ್ವೇಶ್ವರಯ್ಯನವರು ಈ ಪ್ರಾತಿನಿಧ್ಯ ಆಧಾರಿತ ಮೀಸಲಾತಿಯನ್ನು ವಿರೋಧಿಸಿ ಜಾತಿ ಆಧಾರಿತ ಮೀಸಲಾತಿಯನ್ನು ಬೆಂಬಲಿಸಿದರು. ಆದರೂ ಸಾಮಾಜಿಕ ನ್ಯಾಯದ ಪರವಾಗಿದ್ದ ಇಬ್ಬರೂ ದೊರೆಗಳು ಜನರ ಪರವಾಗಿ ನಿಂತು, ಪ್ರಾತಿನಿಧ್ಯ ಆಧಾರಿತ ಮೀಸಲಾತಿಯನ್ನು ಜಾರಿ ಮಾಡಿದರು.
ಭಾರತದ ಇತಿಹಾಸವನ್ನು ಅರಿತಿದ್ದ ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರು ಭಾರತದ ರಾಜಕಾರಣಕ್ಕೆ ಪ್ರವೇಶಿಸಿ, ಬ್ರಿಟಿಷ್ ಸರ್ಕಾರದ ಜೊತೆಗೆ ವ್ಯವಹರಿಸಲು ಅವಕಾಶ ಸಿಕ್ಕ ಸಂಧರ್ಭದಲ್ಲಿ, ಪ್ರಾತಿನಿಧ್ಯ ಆಧಾರಿತ ಮೀಸಲಾತಿಯನ್ನು ಅವರ ಸಂವಿಧಾನದಲ್ಲಿಯೂ ಅಳವಡಿಸಿಲು ಸಲಹೆ ಮತ್ತು ಒತ್ತಾಯವನ್ನು ಹೇರಿದ ಪರಿಣಾಮವಾಗಿ, ಅದರಲ್ಲೂ 1930ರಿಂದ 1932ರ ನಡುವೆ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಗಾಂಧಿಯವರನ್ನು ವಿರೋಧಿಸಿ ತಮ್ಮ ನಿಲುವನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟರು.
ಪರಿಣಾಮ ಬ್ರಿಟಿಷರು 1932ರ ಆಗಸ್ಟ್ ತಿಂಗಳಲ್ಲಿ ‘ಕೋಮುವಾರು ತೀರ್ಪುʼ (Communal Award) ಅನ್ನು ಪ್ರಕಟಿಸಿ ಅಸ್ಪೃಶ್ಯರಿಗೆ ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಮೀಸಲಾತಿಯನ್ನು ನೀಡಿದರು. ಇದನ್ನು ಮುಂದೆ ಪೂನಾ ಒಪ್ಪಂದದಲ್ಲಿಯೂ ಸೇರಿಸಲಾಯಿತು. ಇದರ ಮುಖಾಂತರ ಸಾವಿರಾರು ವರ್ಷಗಳಿಂದ ಅವಕಾಶ ವಂಚಿತರಾಗಿದ್ದ ದಲಿತರಿಗೆ ಅವಕಾಶದ ಬಾಗಿಲುಗಳು ತೆರೆದುಕೊಂಡವು. ಇದರಂತೆ 1934ರಲ್ಲಿ ಬ್ರಿಟಿಷ್ ಸರ್ಕಾರವು ಸೇವೆಗಳಲ್ಲಿ ಮೀಸಲಾತಿಯನ್ನು ಜಾರಿ ಮಾಡುವಂತೆ ಆದೇಶವನ್ನು ಹೊರಡಿಸಿತು. ಆದರೆ, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಬ್ರಾಹ್ಮಣ- ಬನಿಯಾಗಳಾಗಿದ್ದ ಪರಿಣಾಮ ಈ ಆದೇಶವು ಜಾರಿಯಾಗದೆ ಕೇವಲ ಕಾಗದದಲ್ಲಿಯೆ ಉಳಿಯಿತು. ಬ್ರಿಟಿಷರು ಕೂಡ ಪ್ರಜೆಗಳಾದ ಅದರಲ್ಲೂ ಅಸ್ಪೃಶ್ಯರ ವಿರೋಧಿಗಳಾಗಿದ್ದ ಹಿಂದೂ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳಲು ಬಯಸದೆ ಮೀಸಲಾತಿಯ ಜಾರಿಯ ಬಗ್ಗೆ ತಲೆ ಕೆಡಸಿಕೊಂಡಿರಲಿಲ್ಲ.
1935ರಲ್ಲಿ ಭಾರತ ಸರ್ಕಾರದ ಕಾಯ್ದೆ ಜಾರಿಯಾಯಿತು. ಹಾಗೆಯೇ ಜುಲೈ 1942ರಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ವೈಸರಾಯ್ ಸಭೆಗೆ ಆಯ್ಕೆಯಾದರು. ಹಾಗಾಗಿ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಮೊಟ್ಟಮೊದಲ ಬಾರಿಗೆ ಸರ್ಕಾರದ ಮೀಸಲಾತಿಯ ಆಜ್ಞೆಯನ್ನು ಜಾರಿಮಾಡಿಸಿದರು. ಜೊತೆಗೆ 1943 ಅಕ್ಟೋಬರ್ ನಲ್ಲಿ ಸರ್ಕಾರದ ಸುತ್ತೋಲೆಯ ಮುಖಾಂತರ 8.5% ಮೀಸಲಾತಿಯನ್ನು ನಿಗದಿಪಡಿಸಿದರು. ನಂತರ ಜನಸಂಖ್ಯೆಯ ಅನುಗುಣವಾಗಿ 1946ರ ಮೇ ನಲ್ಲಿ ಅದನ್ನು12.5%ಗೆ ಹೆಚ್ಚಿಸಿದರು. ಇದರ ಜೊತೆಗೆ SC/ST ಗಳಿಗೆ ಶಿಕ್ಷಣದ ಸವಲತ್ತುಗಳನ್ನು, ಸೇವೆಯಲ್ಲಿ ವಯಸ್ಸಿನ ಸಡಿಲಿಕೆ, ಪರೀಕ್ಷೆ ಶುಲ್ಕದ ವಿನಾಯಿತಿ ಮತ್ತು ಮುಂತಾದ ಸವಲತ್ತುಗಳನ್ನು ಜಾರಿಗೆ ತಂದು, ಸೂಕ್ತ ಅಭ್ಯರ್ಥಿಗಳನ್ನು ಸರ್ಕಾರಿ ಸೇವೆಗಳಿಗೆ ಆಯ್ಕೆ ಮಾಡುವ ಜವಾಬ್ದಾರಿಯನ್ನು 1943ರಲ್ಲಿ Federal Service Commissionಗೆ ನೀಡಿದರು.
ದುರಂತವೆಂದರೆ, ಸ್ವಾತಂತ್ರ್ಯದ ನಂತರ ಅಂದರೆ ಆಗಸ್ಟ್ 1947ರ ನಂತರ ಬ್ರಾಹ್ಮಣ – ಬಿನಿಯಾ ನಾಯಕರ ಕುತಂತ್ರದಿಂದ ಸರ್ಕಾರವು ಮುಸ್ಲಿಂ, ಕ್ರೈಸ್ತ, ಪಾರ್ಸಿ, ಸಿಖ್ ಮತ್ತು ಆಂಗ್ಲೊ ಇಂಡಿಯನ್ ರಂತಹ ಅಲ್ಪಸಂಖ್ಯಾತ ಸಮುದಾಯಗಳ ಮೀಸಲಾತಿಯನ್ನು ರದ್ದು ಮಾಡಿತು. ಈ ಸಮುದಾಯಗಳ ನಾಯಕರುಗಳಿಗೆ ಅಧಿಕಾರ ಮತ್ತು ಹಣದ ಆಮಿಷಗಳನ್ನು ತೋರಿಸಿ, ತಮ್ಮ ಸಮುದಾಯಗಳಿಗೆ ದ್ರೋಹ ಎಸಗುವಂತೆ ಮಾಡಿದರು. ಮಹಾರಾಜ ಸಿಂಗ್, ಒಬ್ಬ ಕ್ರೈಸ್ತ ನಾಯಕನನ್ನು ಹಾಗು ಮೋದಿ ಎಂಬ ಪಾರ್ಸಿ ನಾಯಕನನ್ನು ಬಾಂಬೆ ಮತ್ತು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದರು. ಹಾಗೆಯೆ ಮೌಲಾನಾ ಅಬ್ದುಲ್ ಕಲಾಂ ಆಝಾದರು ಸಭೆಗಳಿಗೆ ಗೈರು ಆಗುವಂತೆ ಮಾಡಿದರು. ಹೀಗೆ ತಮ್ಮ ಸ್ವಾರ್ಥಕ್ಕೆ ತಮ್ಮ ಸಮುದಾಯಗಳಿಗೆ ಮೋಸ ಮಾಡುವಂತೆ ಮಾಡಿ ತಮ್ಮ ನಾಯಕರುಗಳ ಮುಖಾಂತರವೇ ತಮಗೆ ಗೋರಿ ತೋಡುವಂತೆ ಮಾಡಿದರು! ಸರ್ಕಾರದ ಈ ಅಲ್ಪಸಂಖ್ಯಾತರ ವಿರೋಧಿ ನಿಲುವನ್ನು ಸಭೆಗಳಲ್ಲಿ ಹಾಗು ಅಲ್ಪಸಂಖ್ಯಾತರ ಸಮಿತಿಯಲ್ಲಿ ಉಗ್ರವಾಗಿ ವಿರೋಧಿಸಿದ ಏಕೈಕ ವ್ಯಕ್ತಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಾತ್ರ. ಪ್ರಾರಂಭದಲ್ಲಿ ಅಂಬೇಡ್ಕರ್ ಅವರ ನಿಲುವನ್ನು ತೀವ್ರವಾಗಿ ವಿರೋಧಿಸುತ್ತ ಬಂದ ವಲ್ಲಭ ಪಟೇಲರು ನಂತರ ಬಾಬಾಸಾಹೇಬರ ಹಠ ಮತ್ತು ಜ್ಞಾನಕ್ಕೆ ಸೋತು ದಲಿತರ ಹಕ್ಕುಗಳನ್ನು ಒಪ್ಪಲೇಬೇಕಾಯಿತು.
1944ರಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ ಮಂತ್ರಾಲಯದ ಮುಖಾಂತರ SC Scholarship Board ಅನ್ನು ಸ್ಥಾಪಿಸುವಂತೆ ಮಾಡಿ, ಅದರ ಮುಖಾಂತರ ಅರ್ಹ ಅಭ್ಯರ್ಥಿಗಳನ್ನು ಉಚಿತವಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಕಳಿಸಿಕೊಟ್ಟು, ಅಲ್ಲಿನ ಮುಕ್ತ ವ್ಯವಸ್ಥೆಯಲ್ಲಿ ಹೆಚ್ಚು ಅವಕಾಶವನ್ನು ಬಳಸಿಕೊಳ್ಳುವಂತೆ ಮಾಡಿದರು. ಎನ್.ಶಿವರಾಜು ಅವರು ಈ ಮಂಡಳಿಯ ಮೊದಲನೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಅನೇಕ ದಲಿತ ವಿದ್ಯಾರ್ಥಿಗಳನ್ನು ವಿದೇಶಗಳಿಗೆ ಅದರಲ್ಲೂ ಲಂಡನ್ನಿಗೆ ಕಳಿಸುವುದರಲ್ಲಿ ಯಶಸ್ವಿಯಾದರು. ಈ ಯೋಜನೆಯು ಸತತವಾಗಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯಿತು. ಆದರೆ, 1946ರಲ್ಲಿ ಶಿಕ್ಷಣ ಮಂತ್ರಿಯಾದ ಸಿ. ರಾಜಗೋಪಾಲಚಾರಿ ಎಂಬ ತಮಿಳು ಬ್ರಾಹ್ಮಣ ಜಾತಿ ಆಧಾರಿತ ಮೀಸಲಾತಿಯನ್ನು ಮುಂದುವರಿಸುವ ಸಲುವಾಗಿ ಈ ಯೋಜನೆಯನ್ನು ಸೆಪ್ಟೆಂಬರ್ 1946ರಲ್ಲಿ ರದ್ದು ಮಾಡಿದರು! ಹೀಗೆ ತಮ್ಮ ಜಾತಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ, ಇತರೆ ಸಮುದಾಯಗಳನ್ನು ಬಲಿ ಕೊಟ್ಟು, ಎಲ್ಲವನ್ನೂ ತಾವು ಅನುಭವಿಸಿ ತಮ್ಮ ಮುಂದಿನ ಪೀಳಿಗೆಗೆ ಉಳಿದದ್ದನ್ನು ಉಳಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಇವರು. ಆದರೆ ನಾವು ಮಾತ್ರ, ಅಂದರೆ ದಲಿತರು, ಶೂದ್ರರು ಮತ್ತು ಅಲ್ಪಸಂಖ್ಯಾತರು ಮಾತ್ರ ಅವರ ಕುತಂತ್ರದ ಬಲೆಯಲ್ಲಿ ಸಿಲುಕಿಕೊಂಡು ಒಬ್ಬರ ವಿರುದ್ಧವಾಗಿ ಒಬ್ಬರು ನಿಂತು ನಮಗರಿವಿಲ್ಲದೆಯ ಅವರ ಗುರಾಣಿಗಳಾಗಿ ಕೆಲಸ ಮಾಡುತಿದ್ದೇವೆ! ಅಲ್ಲವೆ? ಯೋಚಿಸಿ…
ಹರಿರಾಮ್. ಎ
ವಕೀಲರು