ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅನೇಕ ಬಲಿದಾನಗಳಿಂದ ಪಡೆದ ಒಂದು ರಾಜಕೀಯ ವ್ಯವಸ್ಥೆಯಾಗಿದೆ. ಸ್ವತಂತ್ರದ ಪೂರ್ವದಲ್ಲಿ ಭಾರತದ ಎಲ್ಲಾ ಸಮಸ್ಯೆಗಳಿಗೂ ಬ್ರಿಟಿಷರನ್ನು ಹೊಣೆ ಮಾಡಲಾಗುತ್ತಿತ್ತು. ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಸ್ವತಂತ್ರ ರಾಜ್ಯಾಧಿಕಾರದಲ್ಲಿ ಅಡಗಿದೆ ಎಂದು, ಅವರ ವಿರುದ್ಧ ದೊಡ್ಡ ಸ್ವತಂತ್ರ ಚಳುವಳಿಯ ನಡೆದು ಕೊನೆಗೂ ಭಾರತವು ಸ್ವಾತಂತ್ರ್ಯಗೊಂಡಿತು. 1952ರ ನಂತರದ ಚುನಾವಣೆಗಳಲ್ಲಿ ನಮ್ಮದೇ ಸರ್ಕಾರಗಳು ಜನರಿಂದ ಆಯ್ಕೆಯಾಗಿ ರಚಿಸಲ್ಪಟ್ಟವು, ಜನರಿಂದ ಆಯ್ಕೆಗೊಂಡ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರ ಅಶೋತ್ತರಗಳಂತೆ ಕಾರ್ಯ ನಿರ್ವಹಿಸಬೇಕಾಗಿದ್ದು ಸರ್ಕಾರಗಳ ಮೂಲಭೂತ ಜವಾಬ್ದಾರಿಯು ಕೂಡ, ಆದರೆ, ಇಲ್ಲಿಯವರೆಗೂ ನಮ್ಮನ್ನಾಳಿದ ಎಲ್ಲಾ ಸರ್ಕಾರಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಹಾಗೆಯೇ ಜೀವಂತವಾಗಿ ಉಳಿಸಿಕೊಂಡು ಬಂದಿವೆ.
ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ನೀಡಿದ್ದು ಅದರ ಜೊತೆಗೆ ಸರ್ಕಾರದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಿದೆ, ಹಾಗಾಗಿಯೇ ಜನರ ಸಮಸ್ಯೆಗಳನ್ನ ಮತ್ತು ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸದ ಸಂದರ್ಭದಲ್ಲಿ ಜನರು ಅಥವಾ ಸಂಘಟನೆಗಳು ಸರ್ಕಾರದ ವಿರುದ್ಧವಾಗಿ ಧರಣಿ ಹಾಗೂ ಪ್ರತಿಭಟನೆಗಳನ್ನು ಮಾಡುವುದು, ಆದರೆ ದುರಂತವೆಂದರೆ ಇಂದು ನಮ್ಮನ್ನಾಳುತ್ತಿರುವ ಸರ್ಕಾರಗಳು ಸ್ವತಂತ್ರ ಪೂರ್ವದ ಪರಕೀಯ ಸರ್ಕಾರಗಳಿಗಿಂತ ಅಮಾನುಷವಾಗಿ ಮತ್ತು ಘೋರವಾಗಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ಅದರಲ್ಲೂ ಕಳೆದ ಎಂಟು ವರ್ಷಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿರುವುದಂತೂ ಸತ್ಯ.ಸರ್ಕಾರಗಳು ಇಂದು ನೇರವಾಗಿ ಜನರ ಧ್ವನಿಗಳನ್ನ ಅಡಗಿಸುವಂಥ ಕೆಲಸದ ಜೊತೆಗೆ ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುವ ಕೆಲಸವು ಮಾಡುತ್ತಾ ಬರುತ್ತಿವೆ.
ಹಾಗೆಯೇ ಇಂದು ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಎಷ್ಟರಮಟ್ಟಿಗೆ ಜನರ ಸಮಸ್ಯೆಗಳನ್ನು ಪರಿಹರಿಸಿದೆ ಮತ್ತು ಎಷ್ಟರಮಟ್ಟಿಗೆ ಸಮಸ್ಯೆಗಳನ್ನು ಸೃಷ್ಟಿ ಮಾಡಿ ಆ ಸಮಸ್ಯೆಗಳನ್ನು ಹಾಗೆ ಉಳಿಸಿಕೊಂಡಿದೆ ಎಂಬುದು ಅರಿಯಲು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಹೋಗಿ ನೋಡಿದರೆ ಅರ್ಥವಾಗುತ್ತದೆ. ಯಾಕೆಂದರೆ ಅದು ಧರಣಿ ಮತ್ತು ಪ್ರತಿಭಟನೆಗಳೆಂದೇ ನಿಗಧಿಪಡಿಸಿರುವ ಸ್ಥಳವಾಗಿರುವುದರಿಂದ ಸಹಜವಾಗಿಯೇ ಅಲ್ಲಿ ಎಲ್ಲಾ ಸಂಘಟನೆಗಳು ಪ್ರತಿಭಟನೆಗೆಂದು ಸೇರಿಕೊಳ್ಳುತ್ತಾರೆ. ಜೊತೆಗೆ ಬಿಡಾರಗಳನ್ನು ಹಾಕಿಕೊಂಡು ಧರಣಿಗಳನ್ನು ಮಾಡುತ್ತಾರೆ. ಕಳೆದ ಎರಡು ಮೂರು ವರ್ಷಗಳಲ್ಲಿ ಪ್ರತಿನಿತ್ಯವೂ ಫ್ರೀಡಂ ಪಾರ್ಕಿನಲ್ಲಿ ಒಂದಲ್ಲ ಒಂದು ತರಹದ ಪ್ರತಿಭಟನೆಗಳು ಹಾಗೂ ಅನೇಕ ಅನಿರ್ದಿಷ್ಟ ಕಾಲಾವಧಿಯ ಧರಣಿ ಸತ್ಯಾಗ್ರಹಗಳು ನಡೆಯುತ್ತಾ ಬರುತ್ತಿವೆ. ಸರ್ಕಾರದ ವಿವಿಧ ಇಲಾಖೆಗಳ ನೌಕರರು, ಗುತ್ತಿಗೆ ಕಾರ್ಮಿಕರ ಜೊತೆಗೆ ಅನೇಕ ಪ್ರಗತಿಪರ, ದಲಿತ ಮತ್ತು ರೈತ ಸಂಘಟನೆಗಳು ಹತ್ತಾರು ಪ್ರತಿಭಟನೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಕಳೆದ 45 ದಿನಗಳಿಂದ ಪಿ ಟಿ ಸಿ ಎಲ್ ಕಾಯಿದೆಯ ತಿದ್ದುಪಡಿಗೆ ಒತ್ತಾಯಿಸಿ ಭೂಮಿ ಕಳೆದುಕೊಂಡಿರುವ ಅಮಾಯಕ ದಲಿತರು ಅನಿರ್ಧಿಷ್ಟಾವಧಿಯ ಧರಣಿಗೆ ಕೂತಿದ್ದಾರೆ.
70 ದಿನಗಳಿಂದ ಒಳಮಿಸಲಾತಿಯನ್ನು ಒತ್ತಾಯಿಸಿ 101 ಪರಿಶಿಷ್ಟರು ಅನಿರ್ದಿಷ್ಟಾವಧಿ ಧರಣಿಯನ್ನು ಮಾಡುತ್ತಿದ್ದಾರೆ. ದುರಂತವೆಂದರೆ ದಿನಾಂಕ 14.02.2023 ರ ಸಂಜೆ ಪ್ರತಿಭಟನೆ ನಡೆಸುತ್ತಿದ್ದ ಬಿಡಾರಕ್ಕೆ ಹೋಗಿ ಅಲ್ಲಿ ಕೂತಿದ್ದ ಪ್ರತಿಭಟನೆಕಾರರನ್ನು ಧಮ್ಕಿಹಾಕಿ “ನೀವು ಇನ್ನು ಮುಂದೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಬಾರದು, ನಿಮಗೆ ಇಲ್ಲಿ ಕೂರಲು ಅವಕಾಶ ಕೊಟ್ಟಿರುವುದು ದೊಡ್ಡದು, ಹಾಗಾಗಿ ಬಾಯಿ ಮುಚ್ಚಿಕೊಂಡು ಕೂರೋ ಹಾಗಿದ್ದರೆ ಇಲ್ಲಿ ಕೂರಿ, ಇಲ್ಲಾಂದ್ರೆ ಎದ್ದೋಗಿ” ನಿಮಗೆ ತಕ್ಕ ಪಾಠವನ್ನು ಕಲಿಸುತ್ತೇನೆ ಎಂದು ಸ್ವತಃ ಎಸಿಪಿ ಅವರೇ ಹೋರಾಟಗಾರರಿಗೆ ಧಮ್ಕಿ ಹಾಕಿದ್ದಾರೆ. ಇದು ಪೊಲೀಸರ ಅಹಂಕಾರದ ಪರಮಾವಧಿಯೋ ಅಥವಾ ನಮ್ಮನ್ನಾಳುತ್ತಿರುವ ಸರ್ಕಾರದ ಕುಮ್ಮಕ್ಕೋ ಗೊತ್ತಿಲ್ಲ. ಆದರೆ ಇಂದು ಸರ್ಕಾರವು ಅಧಿಕಾರಿಗಳ ಮುಖಾಂತರ ಹೋರಾಟಗಾರರನ್ನು ಮತ್ತು ಹೋರಾಗಳನ್ನು ದಮನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನಗಳಂತೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಹೀಗೆ ಹೋರಾಟಗಾರರನ್ನು ಬೆದರಿಸುವ ಅಧಿಕಾರಿಗಳ ದುರ್ವರ್ತನೆಗೆ ಮಟ್ಟ ಹಾಕುವ ತಾಕತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಇದೆಯೆ ಎಂಬ ಪ್ರಶ್ನೆಯನ್ನು ಹೋರಾಟಗಾರರು ಕೇಳುತಿದ್ದಾರೆ.
ಹರಿರಾಮ್. ಎ
ವಕೀಲರು