ಬಂಜಾರ ಜನಾಂಗದ ಕುಲಗುರು ಸೇವಾಲಾಲರ ಜಯಂತಿಯನ್ನು ಪ್ರತೀ ವರ್ಷ ಫೆಬ್ರವರಿ 14 ಮತ್ತು 15 ರಂದು ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಸೇವಾಲಾಲರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಗಡ್ ನಲ್ಲಿ ಪ್ರತೀ ವರ್ಷವೂ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಈ ಜಾತ್ರೆಗೆ ದೇಶದಾದ್ಯಂತ ಲಕ್ಷಾಂತರ ಭಕ್ತಾದಿಗಳು ಧಾವಿಸುತ್ತಾರೆ. ಪ್ರತೀ ವರ್ಷವೂ ಕನಿಷ್ಠ 3 ರಿಂದ 4 ಲಕ್ಷ ಜನರು ಈ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಮತ್ತು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಸಮಾಜಕಲ್ಯಾಣ ಇಲಾಖೆಯು ಈ ಜಾತ್ರಾಮಹೋತ್ಸವದ ಉಸ್ತುವಾರಿಯನ್ನು ವಹಿಸುತ್ತದೆ. ಜಾತ್ರಾಮಹೋತ್ಸವಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೂ ಊಟದ ವ್ಯವಸ್ಥೆ ಇರುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಳು ಅದ್ದೂರಿಯಾಗಿ ಮೂರು ದಿನಗಳ ಕಾಲ ಸತತವಾಗಿ ನಡೆಯುತ್ತದೆ. ದೂರದೂರದಿಂದ ಬರುವ ಭಕ್ತಾದಿಗಳು ವಾಜಾ,ಭಜನ್,ಲಾವಣಿ ಗೀತೆಗಳು, ಲಾವಣಿ ನೃತ್ಯಗಳು, ಲೆಹಂಗಿ ನೃತ್ಯಗಳು ಹೀಗೆ ಲಂಬಾಣಿ ಸಮುದಾಯದ ಅನೇಕ ಜಾನಪದ ಕಲೆಗಳನ್ನು ಅಲ್ಲಿ ಪ್ರದರ್ಶಿಸುತ್ತಾರೆ. ಜೊತೆಗೆ ಪ್ರತೀ ವರ್ಷವೂ ರಾಜ್ಯದ ಮುಖ್ಯಮಂತ್ರಿಗಳು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಯ ಮೆರಗನ್ನು ಹೆಚ್ಚಿಸುತ್ತಾರೆ..
ಲಕ್ಷಾಂತರ ಜನರು ಬಂದುಹೋಗುವ ಈ ಜಾತ್ರಾಹೋತ್ಸವದಲ್ಲಿ ಏನಾದರೂ ಒಂದು ವೈಚಾರಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುವ ಭಕ್ತಾದಿಗಳಲ್ಲಿ ಒಳ್ಳೆಯ ವಿಚಾರವನ್ನು ಬಿತ್ತುವ ಕೆಲಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಮಹಿಳಾ ಗೋಷ್ಠಿ, ಯುವ ಗೋಷ್ಠಿ, ಕವಿ ಗೋಷ್ಠಿ, ವಿಚಾರ ಗೋಷ್ಠಿ ಹಾಗೂ ಧಾರ್ಮಿಕ ಸಭೆಗಳನ್ನು ಏರ್ಪಡಿಸಲಾಗುತ್ತಿದೆ. 13 ನೇ ತಾರೀಕು ಮದ್ಯಾಹ್ನ2 ಗಂಟೆಯಿಂದ ಶುರುವಾಗುವ ಈ ವರ್ಷದ ಮಹಿಳಾ ಗೋಷ್ಠಿ ಕಾರ್ಯಕ್ರಮದಲ್ಲಿ “ಬಂಜಾರ ಸಮುದಾಯದ ಮಹಿಳೆಯರ ಸ್ಥಿತಿಗತಿಗಳು ಮತ್ತು ಸಾಂವಿಧಾನಿಕ ಹಕ್ಕುಗಳು” ಎನ್ನುವ ಶೀರ್ಷಿಕೆಯಡಿಯಲ್ಲಿ ಒಂದು ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿಗಳು ಡಾ.ಮಲ್ಲಿಕಾ ಘಂಟಿ ರವರು ಉದ್ಘಾಟಿಸಿ ಮಾತನಾಡಲಿದ್ದಾರೆ. ಹಾಗೂ ಡಾ.ನಾಗವೇಣಿ, ಡಾ.ಕಾಳಮ್ಮ, ಮತ್ತು ಡಾ.ಜ್ಯೋತಿ ರವರು ವಿಷಯ ಮಂಡನೆ ಮಾಡಲಿದ್ದಾರೆ. ಹಾಗೂ ಮಾಜಿ ಸಚಿವೆ ಹಾಗೂ ಸಾಹಿತಿಗಳಾದ ಬಿ.ಟಿ.ಲಲಿತಾನಾಯ್ಕ್ ಅವರನ್ನು ಒಳಗೊಂಡು ಬಂಜಾರ ಸಮುದಾಯದ ಅನೇಕ ಗಣ್ಯ ಮಹಿಳೆಯರು ಕಾರ್ಯಕ್ರಮದ ಉಪಸ್ಥಿತಿಯಲ್ಲಿರುತ್ತಾರೆ.
13 ನೇ ತಾರೀಕು ಸಂಜೆ 6 ಗಂಟೆಯಿಂದ ಬಂಜಾರ ಭಾಷಾ ಗೋರ್ ಬೋಲಿ ಕವಿಗೋಷ್ಠಿ ಇರುತ್ತದೆ. ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ.ಸಣ್ಣರಾಮ ನಾಯ್ಕ್ ರವರು ಉದ್ಘಾಟಿಸಿ ಮಾತನಾಡಲಿದ್ದಾರೆ ಮತ್ತು ಮಧು ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಖಂಡು ಬಂಜಾರ ರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು ನಲವತ್ತು ಜನ ಕವಿಗಳು ತಮ್ಮದೇ ಬಂಜಾರ ಭಾಷೆಯಲ್ಲಿ ಕವಿತೆಗಳನ್ನು ವಾಚನ ಮಾಡಲಿದ್ದಾರೆ.
ದಿನಾಂಕ 14 ರ ಬೆಳಿಗ್ಗೆ 10 ಗಂಟೆಯಿಂದ “ಪರಿಶಿಷ್ಟ ಸಮುದಾಯಗಳ ಮುಂದಿರುವ ಸವಾಲುಗಳು ಮತ್ತು ಐಕ್ಯತೆ” ಈ ವಿಷಯವಾಗಿ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷರು ಡಾ.ರವಿ ಮಾಕಳಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಜಯದೇವ ನಾಯ್ಕ್ ರವರು ವಹಿಸಲಿದ್ದಾರೆ ಪ್ರಾಸ್ತಾವಿಕ ಭಾಷಣವನ್ನು ರುದ್ರು ಪುನೀತ್ ಮಾಡಲಿದ್ದಾರೆ. ಹಾಗೂ ಡಾ.ಎ. ಬಿ.ರಾಮಚಂದ್ರಪ್ಪ, ಅನಂತ ನಾಯ್ಕ್, ಆದರ್ಶ್ ಎಲ್ಲಪ್ಪ ರವರು ವಿಷಯ ಮಂಡನೆ ಮಾಡಲಿದ್ದಾರೆ. ಸಮುದಾಯದ ಅನೇಕ ಗಣ್ಯವ್ಯಕ್ತಿಗಳು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.