ಸಿನಿಮಾಗಳು ಮಾತನಾಡಬೇಕಾದದ್ದು ಜನರ ಸಮಸ್ಯೆಗಳ ಬಗ್ಗೆ, ಜನರ ನೋವುಗಳ ಬಗೆಗೆ… 19.20.21 ಸಿನಿಮಾ ಕೂಡಾ ತುಳಿತಕ್ಕೊಳಪಟ್ಟ ಜನಗಳ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತದೆ. ಆದರೆ, ಆ ಮಾತು ಒಂದು ಪಾರ್ಟಿಯ ಮುಖವಾಣಿಯಂತೆ ಹೊರಹೊಮ್ಮಿದೆ. ಪಾರ್ಟಿಯ ಮುಖವಾಣಿಯಾಗೋದು ಸಂವಿಧಾನ ಬಾಹೀರವಂತೂ ಅಲ್ಲ; ಆದರೆ, ಆ ಪಾರ್ಟಿ ಮಾಡಿರುವ ಡ್ಯಾಮೇಜ್‌ಗಳನ್ನು ಮುಚ್ಚಿಟ್ಟು, ಅತ್ಯುನ್ನತ ಮುಖವಾಡದಲ್ಲಿ ಮುಖ ತೋರಿಸುವ ಕ್ರಮ ಇದೆಯಲ್ಲ ಅದು, ಅದನ್ನು ಪ್ರಶ್ನಿಸಬೇಕಿರುವುದು ಪ್ರಜ್ಞಾವಂತರ, ಮನುಷ್ಯಪರವಾಗಿ ಯೋಚಿಸುವವರು ಮಾಡಬೇಕಾದ ಕೆಲಸ.

ನಮ್ಮಲ್ಲಿ ಇಂಥ ಸಿನಿಮಾ ನೋಡಿ ಭಾವುಕರಾಗಿ ಒಪ್ಪಿಕೊಂಡುಬಿಡುವ ಮುಗ್ಧರ ಸಂಖ್ಯೆಗೇನೂ ಕಡಿಮೆಯಿಲ್ಲ. ಅಂಬೇಡ್ಕರ್‌ ಹೆಸರು, ಫೋಟೋ ಇದ್ದರೆ ಸಾಕು, ಅದೊಂದು ಅದ್ಭುತ ಸಿನಿಮಾ ಎಂಬ ಭ್ರಮೆ ನಮ್ಮ ಜನಕ್ಕೆ ಅಂಟಿಕೊಂಡುಬಿಡುತ್ತದೆ. ಅದಕ್ಕೂ ಮುಂದೆ ಸಾಗಿ ಸಂವಿಧಾನ, ಸಂವಿಧಾನದ ಆಶಯಗಳು ಇದ್ದಾವೆಂದು ಸ್ವಲ್ಪೇ ಸ್ವಲ್ಪ ಪ್ರಚಾರ ಸಿಕ್ಕರೂ ಸಾಕು… ಆ ಸಿನಿಮಾ ಈ ಶತಮಾನದಲ್ಲೇ ಬಂದಿರದ ಸಿನಿಮಾವೆಂದು ಒಪ್ಪಿಕೊಂಡು, ಆ ಸಿನಿಮಾದ ಅಸಲಿಯತ್ತಿನ ಬಗ್ಗೆ, ವಾಸ್ತವದ ಬಗ್ಗೆ ಟೀಕೆ ಮಾಡುವವರನ್ನು ಗೇಲಿ ಮಾಡಿ, ಕುಣಿದು ಕುಪ್ಪಳಿಸುವ ಜೀತದಾಳುಗಳ ದೊಡ್ಡ ಪಡೆಯೇ ಇಲ್ಲಿದೆ.

ಟೈಟಲ್‌ನಲ್ಲೇ ಹೇಳಿದಂತೆ ಇದೊಂದು ಅಪ್ಪಟ ಪಾಲಿಟ್‌ ಬ್ಯೂರೋ ಪ್ರಾಯೋಜಿತ ಸಿನಿಮಾ! ಅದನ್ನು ನಿರೂಪಿಸಲು ಅಂಬೇಡ್ಕರ್‌ ಅವರನ್ನು ಮತ್ತು ಅವರು ರಚಿಸಿದ ಸಂವಿಧಾನದ ಆರ್ಟಿಕಲ್ಸ್‌ಗಳನ್ನು ಶ್ಯೂರಿಟಿಯಾಗಿ ತೆಗೆದುಕೊಂಡಿದ್ದಾರೆ.

ನಿಮ್ಮಲ್ಲಿ ಸ್ವಲ್ಪವಾದರೂ ಸಂಶೋಧಕನ ಬುದ್ದಿಯಿದ್ದರೆ, ಈ ಸಿಪಿಎಂ ಪಾರ್ಟಿ ಪಂಗಡಗಳು, ಮತ್ತವುಗಳ ಅಂಗಾಂಗ ಸಂಘಗಳು ಬಾಬಾಸಾಹೇಬ ಅಂಬೇಡ್ಕರ್‌ ಅವರ ಫೋಟೋಗಳನ್ನು ಎಷ್ಟು ವರ್ಷಗಳಿಂದ ಬಳಸುತ್ತಿವೆ ಎಂಬುದನ್ನು ಗಮನಿಸಿ. ಇವರಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿ, ʼಸಂವಿಧಾನ ಉಳಿಸಿʼ ಎಂಬ ಅಭಿಯಾನಗಳನ್ನು ಶುರುಮಾಡಿದ್ದು ಯಾವಾಗಿನಿಂದ ಎಂದು ಹುಡುಕಿನೋಡಿ… ಇವರಿಗೆ ನಿಜಕ್ಕೂ ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಕನಿಷ್ಟ, ಗೌರವ ಅಥವಾ ನಂಬಿಕೆ ಇದ್ದಿದ್ದರೆ, ಬಂದೂಕು ಹಿಡಿದು ಕಾಡಿನೊಳಗೆ ಯಾಕೆ ಇರುತ್ತಿದ್ದರು? ಈ 19.20.21 ಚಿತ್ರದೊಳಗೆ ಹೇಳಿರುವ, ವಕೀಲರ ಕೈಲಿ ಮಾತನಾಡಿಸಿರುವ ಸಂವಿಧಾನದ ಆಕ್ಟ್‌ಗಳ ವರ್ಣರಂಜಿತ, ಭಾವುಕ ಡೈಲಾಗುಗಳು ತೀರಾ ಇತ್ತೀಚಿನ ವರ್ಷಗಳ ಕೆಳಗೆ ಅಂದರೆ, ಏಳೆಂಟು ವರ್ಷಗಳ ಕೆಳಗೆ ಯಾಕಿರಲಿಲ್ಲ? ಲಾಲ್‌ ಸಲಾಮ್‌ ಜತೆಗೆ ಜೈ ಭೀಮ್‌ ಜತೆಯಾದದ್ದು ಯಾವತ್ತಿನಿಂದ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿಬಿಟ್ಟರೆ ಇವರ ಬಣ್ಣ ಬಟಾಬಯಲು ಆಗುತ್ತದೆ.

ಈ ಸಿಪಿಎಂ ಪಾರ್ಟಿ ಪಂಗಡಗಳು, ಮತ್ತವುಗಳ ಅಂಗಾಂಗ ಸಂಘಗಳು ಇಲ್ಲಿನ ದಲಿತರನ್ನು, ಆದಿವಾಸಿಗಳನ್ನು ಯಾವುದಕ್ಕೆ ಬಳಸಿಕೊಳ್ಳುತ್ತಾ ಬರುತ್ತಿದ್ದಾರೆ? ಕೇವಲ ಭಾವುಟ, ಬ್ಯಾನರ್‌, ಬಂಟಿಂಗ್ಸ್‌ ಕಟ್ಟುವುದಕ್ಕೆ, ಉಗ್ರ ಭಾಷಣ ಕೇಳುವುದಕ್ಕೆ ಅಷ್ಟೇ ಅಲ್ಲವ? ಅದೂ ಅದೀಗ ತಾನೇ ಡಿಗ್ರಿಗೆ ಕಾಲಿಟ್ಟ ಹುಡುಗರನ್ನು ಬಳಸಿಕೊಂಡು. ಅವರ ವಿದ್ಯಾಭ್ಯಾಸಕ್ಕೂ ಇವರ ಸಂಘಪರಿವಾರ ತಂದಿರುವ ಕುತ್ತು ಅಷ್ಟಿಷ್ಟಲ್ಲ… ಅದನ್ನು ಮರೆಮಾಚುವ ಸಲುವಾಗಿ ಮಂಜು (ವಿಠಲ ಮಲೆಕುಡಿಯ) ಓದಿಗೆ ಸಿನಿಮಾದ ನಿಜ ಪಾತ್ರಗಳಾದ ನವೀನ್‌ ಸೂರಿಂಜೆ ಮತ್ತು ಮುನೀರ್‌ ಕಾಟಿಪಳ್ಳ ಹಣದ ಸಹಾಯ ಮಾಡುವ ಸೀನ್‌ ತುರುಕಲಾಗಿದೆ. ಹಾಗಾದರೆ ಓದು ಮುಂದುವರೆಸಲಾಗದೆ, ಆತ್ಮಹತ್ಯೆ ಮಾಡಿಕೊಂಡ ಇವರದೇ ಪಕ್ಷ, ಸಂಘಟನೆಗಳ ಹುಡುಗ/ಹುಡುಗಿಯರಿಗೆ ಇವರು ಯಾವ ರೀತಿಯ ಸಹಾಯ ಮಾಡಿದ್ದರು? ಇದಕ್ಕೂ ಮೊದಲು ಕೇಳಬೇಕಾದದ್ದು, ಈ ಕೆಂಪಂಗಿಗಳು ಯಾರ ಕೈಗೆ ಬಂದೂಕು ಕೊಟ್ಟು ಪೋಲಿಸರ ಕೈಯಲ್ಲಿ ಸಾಯುವಂತೆ ಮಾಡಿದರೊ, ಆ ಕತೆಗಳನ್ನ ಸಿನಿಮಾ‌ ಮಾಡಿದರೆ ಈ ವ್ಯವಸ್ಥೆಯ ಕ್ರೌರ್ಯಕ್ಕಿಂತ ಹೆಚ್ಚು ಕರುಣಾಜನಕ ಕತೆಗಳನ್ನು ಹೇಳಬಹುದು. ಕನಿಷ್ಟ ಇವರಿಂದ ಬದುಕು ಕಳೆದುಕೊಂಡ ವಿದ್ಯಾರ್ಥಿಗಳ ಡಾಕ್ಯೂಮೆಂಟರಿ ಮಾಡಿದರೂ ಸಾಕು… ಇವರ ಎರ್ರಜಂಡಾ ಅದೆಲ್ಲೋ ಬಿದ್ದಿರುತ್ತದೆ.

ಇಡೀ ಸಿನಿಮಾದಲ್ಲಿ ತೋರಿಸಿರುವ ಪೋಲಿಸರು ಮತ್ತು ನಕ್ಸಲ್‌ ನಿಗ್ರಹ ದಳದವರು ಅದೆಷ್ಟು ಕ್ರೂರಿಗಳು ಎಂದರೆ, ಪಿಸಿಗೂ ಅದೇ ಬುದ್ದಿ, ತ್ರಿಬಲ್‌ ಸ್ಟಾರ್‌ ಅಧಿಕಾರಿಗೂ ಅದೇ ಬುದ್ದಿ! ಅವರ್ಯಾರಲ್ಲೂ ಕನಿಷ್ಟ ಮಾನವೀಯತೆ ಇಲ್ಲವೇ ಇಲ್ಲವೆಂಬಂತೆ ಕ್ರೂರವಾಗಿ ಚಿತ್ರಿಸಲಾಗಿದೆ. ಮಾನವೀಯತೆಯುಳ್ಳ ಅದೆಷ್ಟು ಪೊಲೀಸರ ಪಟ್ಟಿ ಬೇಕು ಹೇಳಿ ಕೊಡುತ್ತೇನೆ. ಸುಮ್ಮನೇ ರೋಚಕತೆ ಸೃಷ್ಟಿಸಲು, ಕಥೆಯನ್ನು ವೈಭವೀಕರಿಸಲು ಎಲ್ಲರನ್ನೂ ಹೋಲ್ಸೇಲ್‌ ಆಗಿ ಕ್ರೂರಿಗಳಾಗಿ ಚಿತ್ರಿಸಿಬಿಡುವುದು ದೊಡ್ಡ ಕ್ರೂರತನ! ಈ ಚಿತ್ರದ ಪ್ರಕಾರ ನಕ್ಸಲರು ಮಾತ್ರ ಒಳ್ಳೆಯವರು; ಪೊಲೀಸರು ಒಳ್ಳೆಯವರು ಅಲ್ಲವ? ಇದೂವರೆಗೂ ನಕ್ಸಲರು ಕೊಂದಿದ್ದು ಯಾರನ್ನು? 90 ಪರ್ಸೆಂಟಿಗಿಂತಲೂ ಅಧಿಕವಾಗಿ ಯಾರೋ ಪಾಪದ ಬಡ ಕಾನ್ಸ್‌ಟೇಬಲ್‌ನನ್ನೋ, ಬಡ ಸಿಆರ್‌ಪಿಎಫ್‌ ಯೋಧರನ್ನೋ ಅಲ್ಲವ? ಇಂದಿನ ಅವರ ಸ್ಥಿತಿಗತಿಗಳ ಬಗ್ಗೆ ಈ ಕಮ್ಯೂ ಸಂಘಪರಿವಾರ ಅಧ್ಯಯನ ಮಾಡಿದೆಯ? ಇಂಥ ಯಾವುದೇ ಕೆಲಸ ಮಾಡದ ಈ ಪರಿವಾರ UA(P)A ಬಗ್ಗೆ ಮಾತನಾಡುವ ಕನಿಷ್ಟ ಅರ್ಹತೆ ಉಳಿಸಿಕೊಂಡಿದೆಯ?

ಡ್ರೋಣ್‌ ಶಾಟ್‌ಗಳಲ್ಲಿ ಮಾತ್ರ ದಟ್ಟವಾಗಿ ಕಾಣುವ ಕಾಡು, ಮಿಕ್ಕ ದೃಶ್ಯಗಳಲ್ಲಿ ಕಾಂತಾರ ಸಿನಿಮಾದಲ್ಲಿ ಕಾಣಿಸಿದಂತೆ ಪಿಕ್‌ನಿಕ್‌ ಸ್ಪಾಟ್‌ ಥರದಲ್ಲೇ ಕಾಣಿಸುತ್ತದೆ. ಆದಿವಾಸಿ, ಆದಿವಾಸಿ ಅಂತ ಹೇಳಿದ್ದೇ ಬಂತು… ಅವರ ಗುರುತೇನು? ಅವರನ್ನು ಯಾವ ಹೆಸರಿನಿಂದ ಗುರುತಿಸಲಾಗುತ್ತದೆ ಎಂಬ ಸಣ್ಣ ಅಂಶವೂ ನಿರ್ದೇಶಕನಿಗೆ ಹೊಳೆದಿಲ್ಲ! ಹಾಗೆಯೇ ಮಜಾ ಅನಿಸಿದ್ದು, ಅವರೇ ಹೇಳುವ ದಟ್ಟ ಕಾಡಿನಲ್ಲಿ ಮೊಬೈಲ್‌ ನೆಟ್ವರ್ಕ್‌ ಬಹಳ ಚೆನ್ನಾಗಿ ಸಿಗುತ್ತದೆ!

ಒಂದೇ ಒಂದು ಮೆಚ್ಚಬಹುದಾದ ವಿಷಯವೆಂದರೆ, ಈ ಸಿನಿಮಾದ ನಿರ್ದೇಶಕ ಮಂಜುನಾಥ ಸೋಮಕೇಶವ ರೆಡ್ಡಿ* (ಮಂಸೋರೆ) ತಮ್ಮ ಆಕ್ಟ್‌ 1978 ಸಿನಿಮಾದಲ್ಲಿ ಮಾಡಿದ ಮ್ಯಾಜಿಕ್‌ ಅನ್ನು ಈ ಸಿನಿಮಾದ ಕಡೆಯಲ್ಲೂ ಸ್ವಲ್ಪ ಕಡಿಮೆ ಮಾಡಿದ್ದಾರೆ! ಅದೇನೆಂದರೆ, ಆಕ್ಟ್‌ 1978 ಸಿನಿಮಾದಲ್ಲಿ ಒಂದು ಇಲಾಖೆಯೇ ಮಹಿಳೆಗೆ ನ್ಯಾಯ ಕೊಡಿಸಲು ಸಾಧ್ಯವಾಗದೆ ಎಲ್ಲರೂ ರಾಜೀನಾಮೆ ಗೀಚುತ್ತಾರಲ್ಲ… ಅಂಥ ಪವಾಡಕ್ಕೆ 19.20.21ರಲ್ಲಿ ಸ್ವಲ್ಪ ರಿಯಾಯಿತಿ ಕೊಟ್ಟುಬಿಟ್ಟಿದ್ದಾರೆ. ರಿಟೈರ್‌ ಆದ ತ್ರಿಬಲ್‌ ಸ್ಟಾರ್‌ ಅಧಿಕಾರಿ ಕಡೆಯಲ್ಲಿ ಕೇಸು ಗೆದ್ದ ವಕೀಲರಿಗೆ ಕಂಗ್ರಾಟ್ಸ್‌ ಹೇಳುವ ಸೀನ್‌ ಅನ್ನು ನೋಡಿ ಯಾವ ಕಣ್ಣಿನಿಂದ ಅಳುವುದೆಂದು ಗೊಂದಲಕ್ಕೆ ಬಿದ್ದೆ!

ನಿಜಕ್ಕೂ ನಾನು ಇಷ್ಟು ಬರೆಯಬಾರದು ಎಂದುಕೊಂಡು, ಇಷ್ಟು ಬರೆಸಿಕೊಳ್ಳುವ ಅರ್ಹತೆ ಇಲ್ಲದ ಸಿನಿಮಾ ಎಂದು, ನಿನ್ನೆ ಒಂದೇ ಒಂದು ಸಣ್ಣ ಪ್ಯಾರಾ ಬರೆದು ಸುಮ್ಮನಾಗಿದ್ದೆ. ಆದರೆ ಈ ಪರಿವಾರದ ಜೀತದಾಳುಗಳು ನನ್ನ ಆ ಪ್ಯಾರಾ ಇಟ್ಟುಕೊಂಡು ಗೇಲಿ ಮಾಡಿ, ಉದ್ದುದ್ದದ ಲೇಖನ ಬರೆದು, ನಿಮ್ಹಾನ್ಸ್‌ ಆಸ್ಪತ್ರೆಯ ರೂಟ್‌ ಮ್ಯಾಪ್‌ ಕಳಿಸುವ ವಿಕೃತಿಗೆ ಬಿದ್ದ ಕಾರಣ ಇಷ್ಟು ಬರೆಯಬೇಕಾಯಿತು… ಅಷ್ಟೇ… ಇದರ ನಡುವೆ, ನಾನು ನಿನ್ನೆ ಬರೆದ ಸಣ್ಣ ಪ್ಯಾರಾದಲ್ಲಿ ಚಿತ್ರದಲ್ಲಿ ಬರುವ ವಕೀಲರನ್ನು ಮೇಲ್ಜಾತಿ ಎಂದಿದ್ದೆ. ಅದನ್ನೇ ದೊಡ್ಡ ಅಪರಾಧವೆಂಬಂತೆ, ʼಅವರು ಮೇಲ್ಜಾತಿಯವರಲ್ಲ; ಹಿಂದುಳಿದ ವರ್ಗದವರುʼ ಎಂದು ಬಹಳಷ್ಟು ಮಂದಿ ಲೇಟಾಗಿ ತೌಡು ಕುಟ್ಟುತ್ತಿದ್ದಾರೆ! ಅಲ್ರೀ, ಇಡೀ ಸಿನಿಮಾದಲ್ಲಿ ಆ ಲಾಯರ್‌ ಹಿಂದುಳಿದ ವರ್ಗದವರು ಎಂಬ ಸಣ್ಣ ದೃಶ್ಯವಾಗಲೀ, ಸೂಕ್ಷ್ಮವಾಗಿ ಎಲ್ಲೂ ಕೂಡಾ ಕಟ್ಟಿಕೊಡದ ಲೋಪವೆಸಗಿ, ಪ್ರಶ್ನೆ ಎದ್ದಾಗ ಮಾತ್ರ ತೌಡು ಕುಟ್ಟೋದು ಎಷ್ಟು ಸರಿ ಹೇಳಿ?

ಒಟ್ಟಿನಲ್ಲಿ ಇಡೀ ಸಿನಿಮಾ ಸಿದ್ದರಾಮಯ್ಯನವರನ್ನು ಜವಾಬ್ದಾರಿ ಇಲ್ಲದ ವಿರೋಧಪಕ್ಷದ ನಾಯಕ ಎಂದು ಬಿಂಬಿಸುತ್ತದೆ. ಈ ಕರಾಳ ಕಾಯ್ದೆ ತಂದ ಕಾಂಗ್ರೆಸ್‌ ಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ ಎಂಬ ಸತ್ಯ ಬಿಟ್ಟರೆ, ಮಿಕ್ಕಿದ್ದು ಕೆಂಪುಬಣ್ಣದ ಧೂಳು ಮತ್ತು ಹೊಗೆ! ಅಷ್ಟೇ…

ವಿ.ಸೂ: ಈ ಚಿತ್ರದ ನಿರ್ದೇಶಕ ಮನಸೋರೆ ಅವರೇ ತಮ್ಮ ವಾಲ್ ಮೇಲೆ‌ ಸ್ವತಃ ಸ್ಪಷ್ಟಪಡಿಸಿರುವ ಕಾರಣ ಮಂಜುನಾಥ ಸೋಮಶೇಖರ ರೆಡ್ಡಿ ಎಂಬುದನ್ನು ಮಂಜುನಾಥ ಸೋಮಕೇಶವ ರೆಡ್ಡಿ ಎಂದು ಬದಲಿಸಲಾಗಿದೆ!

ವಿ.ಆರ್.ಕಾರ್ಪೆಂಟರ್

One thought on “<strong>ಪಾಲಿಟ್‌ ಬ್ಯೂರೋ ಪ್ರಾಯೋಜಕತ್ವದ 19.20.21</strong>”

Leave a Reply

Your email address will not be published. Required fields are marked *