ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಮಾಡುವ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಆದೇಶವನ್ನು ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಫೋನ್ ಕರೆ ಸ್ವೀಕರಿಸದಿದ್ದರೆ, ತುರ್ತು ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತದೆ. ಈ ಆದೇಶವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಉತ್ತಮ ಸಮನ್ವಯ ಏರ್ಪಡಿಸಲು ಸಹಕಾರಿಯಾಗಿದೆ.
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರು. ಅವರಿಗೆ ಸರ್ಕಾರವೇ ಮೊಬೈಲ್ ಮತ್ತು ಬಿಲ್ ಸೌಲಭ್ಯವನ್ನು ನೀಡಿರುತ್ತದೆ. ಆದ್ದರಿಂದ, ಕೆಲಸದ ಅವಧಿಯಲ್ಲಿ ಜನಪ್ರತಿನಿಧಿಗಳ ಕರೆಗೆ ಓಗೊಡುವುದು ಅವರ ಕರ್ತವ್ಯದ ಭಾಗವಾಗಿದೆ. ಒಂದು ವೇಳೆ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೆ, ನಂತರ ‘ಕಾಲ್ ಬ್ಯಾಕ್‘ ಮಾಡುವುದು ಈಗ ಕಡ್ಡಾಯವಾಗಿದೆ. ಇದು ಅಧಿಕಾರಿಗಳಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಹಲವು ಬಾರಿ ಶಾಸಕರು ಅಥವಾ ಸಂಸದರು ಕರೆ ಮಾಡಿದಾಗ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಇದು ಕೇವಲ ವೈಯಕ್ತಿಕ ನಿರ್ಲಕ್ಷ್ಯವಲ್ಲ, ಬದಲಾಗಿ ಇದು ‘ಶಿಷ್ಟಾಚಾರ‘ದ ಉಲ್ಲಂಘನೆಯೂ ಹೌದು. ಸರ್ಕಾರದ ಈ ಆದೇಶವು ಇಂತಹ ನಿರ್ಲಕ್ಷ್ಯಕ್ಕೆ ಲಗಾಮು ಹಾಕಲಿದೆ.
ಸಭೆಗಳಲ್ಲಿರುವಾಗ ಅಥವಾ ಕ್ಷೇತ್ರ ಕಾರ್ಯದಲ್ಲಿದ್ದಾಗ ಸತತ ಕರೆಗಳನ್ನು ಸ್ವೀಕರಿಸುವುದು ಕಷ್ಟವಾಗಬಹುದು.ಕೆಲವು ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಲು ಅಥವಾ ಅನಗತ್ಯ ವಿಷಯಗಳಿಗಾಗಿ ಪದೇ ಪದೇ ಕರೆ ಮಾಡುವ ಸಾಧ್ಯತೆಯೂ ಇರುತ್ತದೆ.

